ಪ್ರತಿಭೆಗೆ ಅವಕಾಶ ಸಿಗದಿದ್ದರೆ ದೇಶಕ್ಕೆ ನಷ್ಟ: ವೀರಪ್ಪ ಮೊಯ್ಲಿ

ಬೆಂಗಳೂರು, ಅ.7: ವಿದ್ಯಾರ್ಥಿಗಳ ಪ್ರತಿಭೆಗೆ ಯೋಗ್ಯವಾದ ಅವಕಾಶಗಳು ಸಿಗದಿದ್ದರೆ ದೇಶಕ್ಕೆ ಅಪಾರ ನಷ್ಟವೆಂದೇ ಭಾವಿಸಬೇಕು. ಹೀಗಾಗಿ ಅಧಿಕಾರದಲ್ಲಿದ್ದವರು ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಸಂಸದ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಶನಿವಾರ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ‘ಜಾಗತಿಕ ಪ್ರಚಲಿತ ವಿದ್ಯಾಮಾನಗಳು, ಅನ್ವೇಷಣೆ, ಸವಾಲುಗಳ ನಿರ್ವಹಣೆ ಮತ್ತು ಪಾತ್ರ’ ಎಂಬ ವಿಚಾರ ಸಂಕಿಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸುಪ್ತವಾದ ಪ್ರತಿಭೆಗಳಿರುತ್ತವೆ. ಅದನ್ನು ಬೆಳಗುವಂತೆ ಮಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತರು ನಮ್ಮೆದುರಿಗಿದ್ದರು ಅವರನ್ನು ನಿರ್ಲಕ್ಷಿಸುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಇದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಪಾಯಕಾರಿ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿದ ಸಾಮಾಜಿಕ ನ್ಯಾಯದ ಫಲವಾಗಿ ಎಲ್ಲ ಜಾತಿಯ ಜನತೆಯೇ ಪ್ರತಿಭಾವಂತರಾಗುತ್ತಿದ್ದಾರೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಅವಕೃಪೆಯಿಂದಾಗಿ ಇಂದಿಗೂ ಕೆಲ ಸಮುದಾಯದ ಪ್ರತಿಭಾವಂತರಿಗೆ ಅವಕಾಶ ಮರೀಚಿಕೆಯಾಗಿದೆ ಎಂದು ವಿಷಾದಿಸಿದರು.
1970ರಲ್ಲಿ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಂಡಂತಹ ವಾತಾವರಣ ಬೆಂಗಳೂರಿನಲ್ಲಿ ತರಲು 15ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಲೆಕ್ಟ್ರಾನಿಕ್ ಸಿಟಿ ನಿರ್ಮಿಸಲಾಯಿತು. ಇದರಿಂದಾಗಿ ಇಡೀ ಪ್ರಪಂಚ ಬೆಂಗಳೂರಿನತ್ತ ಕಣ್ಣರಳಿಸಿ ನೋಡುವಂತಾಯಿತು. 1990ರಿಂದ ದೇಶದಲ್ಲಿ ಅನೇಕ ಏರುಪೇರುಗಳಾದರು ಆರ್ಥಿಕವಾಗಿ ಇಂದಿಗೂ ಸದೃಢವಾಗಿದೆ ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಬಾಹ್ಯ ಆಕರ್ಷಣೆಗೆ ಒಳಗಾಗಬಾರದು. ನಿಶ್ಚಿತವಾದ ಗುರಿಯೊಂದಿಗೆ ಮುನ್ನಡೆಯುವ ಮೂಲಕ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಸಾಧಕರಾಗಬೇಕು. ಅಧಿಕಾರ ವರ್ಗವು ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕಲ್ಪಿಸಲು ಮುಂದಾಗಬೇಕು ಎಂದು ಆಶಿಸಿದರು.
ಈ ವೇಳೆ ಅಪ್ಘಾನಿಸ್ತಾನ, ಸೂಡಾನ್ ಸೇರಿದಂತೆ ವಿವಿಧ ದೇಶಗಳ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೃಷ್ಣ, ಪ್ರಾಂಶುಪಾಲ ಎಸ್.ಎನ್.ವೆಂಕಟೇಶ್, ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







