ಪ್ರಶಸ್ತಿ ಆಯ್ಕೆ ಪ್ರಕ್ರಿಯೆಗೂ ನನಗೂ ಸಂಬಂಧವಿಲ್ಲ: ಕೋಟ ಸ್ಪಷ್ಟನೆ
ಪ್ರಕಾಶ್ ರೈಗೆ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ವಿವಾದ

ಉಡುಪಿ, ಅ.7: ಡಾ.ಕೋಟ ಶಿವರಾಮ ಕಾರಂತ ಟ್ರಸ್ಟ್ ಹಾಗೂ ಕೋಟತಟ್ಟು ಗ್ರಾಪಂನ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಜ್ಞಾನ ಪೀಠ ಪ್ರಶಸ್ತಿ ವಿಜೇತ ಕೋಟ ಡಾ.ಶಿವರಾಮ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಈ ಬಾರಿ ಚಿತ್ರ ನಟ ಪ್ರಕಾಶ್ ರೈ ಅವರಿಗೆ ನೀಡುವ ವಿಷಯದಲ್ಲಿ ತನ್ನ ಯಾವುದೇ ಪಾತ್ರವಿಲ್ಲ. ಆಯ್ಕೆ ಪ್ರಕ್ರಿಯೆಗೂ ನನಗೂ ಯಾವುದೇ ಸಂಬಂಧ ಗಳಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ತನ್ನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದರು. ನಟ ಪ್ರಕಾಶ್ ರೈ ಅವರಿಗೆ ಈ ಬಾರಿ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನನ್ನ ಹೆಸರು ಉಲ್ಲೇಖಿಸಿ ಬರುತ್ತಿರುವ ಹೇಳಿಕೆಗಳಿಂದ ನನಗೆ ತೀವ್ರ ನೋವಾಗಿದೆ ಎಂದರು.
ಡಾ. ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ನಾನು ಸೇರಿಲ್ಲ. ಹೀಗಾಗಿ ನನಗೂ ಪ್ರಶಸ್ತಿ ವಿಜೇತರ ಹೆಸರು ಅಂತಿಮಗೊಳಿಸುವ ಆಯ್ಕೆ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ಪ್ರಶಸ್ತಿಯ ವಿಚಾರದಲ್ಲಿ ನನ್ನ ಹೆಸರನ್ನು ವಿನಾಕಾರಣ ಎಳೆದುತಂದು, ವಿವಾದ ಎಬ್ಬಿಸುತ್ತಿರುವುದು ಸಹಜವಾಗಿ ನನಗೆ ನೋವು ತಂದಿದೆ ಎಂದವರು ಹೇಳಿದರು.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬರುತ್ತಿರುವ ಗೊಂದಲದ ವರದಿಗಳಿಂದ, ಪ್ರತಿಭಟನೆಯ ಸುಳಿವುಗಳಿಂದ ಸಂಘಟನೆ ಹಾಗೂ ತನ್ನ ಪಕ್ಷದ ಹಿರಿಯರು ಆತಂಕಗೊಂಡಿದ್ದಾರೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಅ.10ರಂದು ಕೋಟದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ಜಿಲ್ಲಾ ಬಿಜೆಪಿಯ ಹಿರಿಯ ನಾಯಕರು ಹಾಗೂ ರಾಜ್ಯದ ನನ್ನ ಮುಖಂಡರೊಂದಿಗೆ ಚರ್ಚಿಸಿ ಅವರ ಆದೇಶದಂತೆ ನಡೆದು ಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಡಾ.ಕಾರಂತರು ಕೆಲಸ ಮಾಡಿದ, ಅವರ ಆಸಕ್ತಿಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಗಣ್ಯರಿಗೆ ಡಾ.ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಕಳೆದ 13 ವರ್ಷಗಳಿಂದ ನೀಡಲಾಗುತ್ತಿದೆ. ಕೋಟತಟ್ಟು ಗ್ರಾಪಂ ನೀಡುವ ಈ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯ ಆಯ್ಕೆಗೆ ಆಯ್ಕೆ ಸಮಿತಿಯೊಂದಿದ್ದು, ಅದು ಶಿಫಾ ರಸ್ಸು ಮಾಡುವ ಹೆಸರನ್ನು ಪ್ರತಿ ವರ್ಷ ಆಯ್ಕೆ ಮಾಡಲಾಗುತ್ತಿದೆ ಎಂದು ಕೋಟ ತಿಳಿಸಿದ್ದಾರೆ.
ಪ್ರಕಾಶ್ ರೈ ಅವರ ಹೇಳಿಕೆಯ ಕುರಿತಂತೆ ತಮ್ಮ ಅಭಿಪ್ರಾಯವನ್ನು ಕೇಳಿದಾಗ ಉತ್ತರಿಸಲು ನಿರಾಕರಿಸಿದ ಕೋಟ, ಪ್ರಧಾನಿಯವರನ್ನು ಟೀಕಿಸಿದ ಕುರಿತು ಕೇಳಿದಾಗ, ರೈ ಪ್ರಧಾನಿ ಬಗ್ಗೆ ಮಾತನಾಡಿರುವುದು ಅತ್ಯಂತ ನೋವು ತಂದಿದೆ ಎಂದರು.
ಪ್ರಶಸ್ತಿಯ ಸ್ಥಾಪನೆಯಲ್ಲಿ ತಾನು ಮುಂಚೂಣಿಯಲ್ಲಿದ್ದರೂ, ಈಗ ತಾನು ಟ್ರಸ್ಟ್‌ನಲ್ಲಿ ಒಬ್ಬ ಸದಸ್ಯನಾಗಿದ್ದೇನೆ. ಆದರೆ ಪ್ರಶಸ್ತಿ ಆಯ್ಕೆಯಲ್ಲಿ ತನಗೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಪಂ ಅಧ್ಯಕ್ಷರ ಹೇಳಿಕೆ: ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಕೋಟತಟ್ಟು ಗ್ರಾಪಂ ಅಧ್ಯಕ್ಷ ಪ್ರಮೋದ್ ಹಂದೆ, ಪ್ರಕಾಶ್ ರೈ ಅವರಿಗೆ ಪ್ರಶಸ್ತಿ ನೀಡು ವುದನ್ನು ವಿರೋಧಿಸಿ ಗ್ರಾಪಂಗೆ ಇದುವರೆಗೆ ಯಾವುದೇ ಮನವಿ ಬಂದಿಲ್ಲ. ಕೋಟತಟ್ಟು ಗ್ರಾಪಂನಿಂದ ನೀಡುವ ಪ್ರಶಸ್ತಿ ಇದಾಗಿದೆ. ಇದಕ್ಕಾಗಿ ಪ್ರತ್ಯೇಕ ಆಯ್ಕೆ ಸಮಿತಿ ಇದೆ. ಈ ಸಮಿತಿ ಒಂದೂವರೆ ತಿಂಗಳ ಹಿಂದೆಯೇ ಪ್ರಶಸ್ತಿಗೆ ರೈ ಅವರ ಹೆಸರನ್ನು ಆಯ್ಕೆ ಮಾಡಿತ್ತು. ಆದುದರಿಂದ ಈ ಆಯ್ಕೆಗೆ ವಿರೋಧ ಸರಿಯಲ್ಲ ಎಂದರು.
ಈ ಪ್ರಶಸ್ತಿಗೆ ಪ್ರಕಾಶ್ ರೈ ನಿಜವಾಗಿಯೂ ಅರ್ಹರು. ಈ ಪ್ರಶಸ್ತಿಗೂ ನಟ ಪ್ರಕಾಶ್ ರೈ ಅವರ ವೈಯಕ್ತಿಕ ಹೇಳಿಕೆಗೂ ಸಂಬಂಧ ಕಲ್ಪಿಸಬಾರದು. ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬಂದೇ ಬರುತ್ತಾರೆ. ಡಾ. ಕಾರಂತರ ಹೆಸರಿಗೆ ಕಳಂಕ ತರುವ ಕೆಲಸ ಯಾರೂ ಮಾಡಬಾರದು ಎಂದು ಪ್ರಮೋದ್ ಹಂದೆ ಹೇಳಿದರು.







