ಕೃಷಿ, ಮೀನುಗಾರಿಕಾ ಉಪಕರಣಗಳ ಜಿಎಸ್‌ಟಿ ಇಳಿಸಲು ಮನವಿ

ಉಡುಪಿ, ಅ.7: ಮೀನುಗಾರಿಕೆ ಮತ್ತು ಕೃಷಿ ಸಂಬಂಧಿ ಉಪಕರಣಗಳಿಗೆ ಕೇಂದ್ರ ಸರಕಾರ ವಿಧಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಗಣನೀಯವಾಗಿ ಕಡಿತಗೊಳಿಸುವಂತೆ ನಗರದ ಡಯಾನಾ ಹೊಟೇಲ್‌ನಲ್ಲಿ ಕಳೆದ ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ಅವರ ಉಪಸ್ಥಿತಿಯಲ್ಲಿ ನಡೆದ ಜಿಎಸ್‌ಟಿ ಸಮಾಲೋಚನಾ ಸಭೆಯಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮಂದಾರ್ತಿಯ ಕೃಷಿ ಉಪಕರಣಗಳ ಮಾರಾಟಗಾರ ಪ್ರದೀಪ್ ಹೆಬ್ಬಾರ್, ಕೃಷಿ ಉಪಕರಣಗಳಿಗೆ ಶೇ.18ರಷ್ಟು ಜಿಎಸ್‌ಟಿ ತೆರಿಗೆ ಹಾಕಲಾಗಿದೆ. ಪವರ್ ಟಿಲ್ಲರ್‌ಗೆ ಶೇ.12, ದನದ ಹಟ್ಟಿಗೆ ಬಳಸುವ ಮ್ಯಾಟ್‌ಗೆ ಶೇ.28ರಷ್ಟು ಜಿಎಸ್‌ಟಿ ಇದೆ. ಇದರಿಂದ ಕೃಷಿಕರಿಗೆ ಭಾರೀ ತೊಂದರೆ ಎದುರಾಗಿದ್ದು, ಕೃಷಿ ಉದ್ದಿಮೆಯ ಮೇಲೆ ಇದರಿಂದ ಪರಿಣಾಮ ಉಂಟಾಗಲಿದೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಅವರು ಮಾತನಾಡಿ,1991ರಿಂದ ಬಲೆ ಸೇರಿದಂತೆ ಮೀನುಗಾರರು ಬಳಸುವ ಉಪಕರಣಗಳಿಗೆ ತೆರಿಗೆ ಇದ್ದಿರಲಿಲ್ಲ. ಆದರೆ ಈಗ ಮೀನುಗಾರರು ಬಳಸುವ ಬಲೆ, ವಯರ್ ರೋಪ್, ಮಂಜುಗಡ್ಡೆಯನ್ನು ಜಿಎಸ್‌ಟಿ ಅಡಿಗೆ ತರಲಾಗಿದೆ. ಮೀನುಗಾರರು, ಮೀನುಗಾರಿಕೆ ಉಳಿಯಬೇಕಿದ್ದರೆ ಇದನ್ನು ಜಿಎಸ್‌ಟಿಯಿಂದ ಹೊರಗಿಡಬೇಕು ಎಂದು ಮನವಿ ಸಲ್ಲಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಮಾತನಾಡಿ, ನೋಟ್ ಅವೌಲ್ಯೀಕರಣ ಹಾಗೂ ಜಿಎಸ್‌ಟಿಯಿಂದ ನಿಜವಾಗಿ ಒಳ್ಳೆಯ ಫಲಬರಬೇಕಿತ್ತು. ಆದರೆ ನೆಲಮಟ್ಟದಲ್ಲಿ ಇದು ಜನರಿಗೆ ಪೂರಕವಾಗುವ ಬದಲು ಪ್ರತಿಕೂಲವೇ ಆಗುತ್ತಿದೆ. ಜಿಎಸ್‌ಟಿಯ ನ್ಯೂನತೆಗಳು ಹಲವು ಇವೆ. ಟ್ಯಾಕ್ಸ್ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಬ್ಯಾಂಕಿನಲ್ಲಿ ದಿನಕ್ಕೊಂದು ಕಾನೂನು ಹೇಳಲಾಗುತ್ತಿದೆ ಎಂದರು.
ಮೀನುಗಾರಿಕೆಗೆ ಬಳಸುವ ಮಂಜುಗಡ್ಡೆ ತಯಾರಿ ಪ್ಯಾಕ್ಟರಿಗಳನ್ನು ಈ ಮೊದಲು ತೆರಿಗೆಯಿಂದ ಹೊರಗಿಡಲಾಗಿತ್ತು. ಆದರೆ ಈಗ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಮಂಜುಗಡ್ಡೆಯನ್ನು ಮೊದಲಿನಂತೆ ತೆರಿಗೆಯಿಂದ ಮುಕ್ತಗೊಳಿಸುವಂತೆ ಜಿಲ್ಲಾ ಸಂಘದ ಅಧ್ಯಕ್ಷ ರಾಜೇಂದ್ರ ಸುವರ್ಣ ನುಡಿದರು.
ಉದ್ಯಮಿ ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಎಲ್‌ಪಿಜಿ ಗ್ಯಾಸ್‌ನಲ್ಲಿ ಮನೆಬಳಕೆಗೆ ಶೇ.5 ಹಾಗೂ ಖಾಸಗಿಗೆ ಶೇ.18 ಜಿಎಸ್‌ಟಿ ವಿಧಿಸಲಾಗಿದೆ. ಇದರಿಂದ ಸಾಮಾನ್ಯ ಜನರಿಗೂ, ಏಜೆನ್ಸಿಗಳಿಗೂ ತೊಂದರೆಯಾಗುತ್ತಿದೆ ಎಂದರು. ಬಾರ್ ಎಂಡ್ ರೆಸ್ಟೋರೆಂಟ್‌ಗಳ ಎಸಿಗೆ ವಿಧಿಸಿರುವ ಶೇ.18 ಜಿಎಸ್‌ಟಿಯನ್ನು 12ಕ್ಕೆ ಇಳಿಸುವಂತೆ ಮಿಥುನ್ ಹೆಗ್ಡೆ ಮನವಿ ಮಾಡಿದರು.
ಕೊನೆಯಲ್ಲಿ ಮಾತನಾಡಿದ ಸಂಸದೆ ಶೋಭಾ, ಜಿಎಸ್‌ಟಿ ಕೇವಲ ಮೂರು ತಿಂಗಳ ಕೂಸು. ಮುಂದಿನ ಫೆಬ್ರವರಿಯಲ್ಲಿ ಮಂಡನೆಯಾಗುವ ಬಜೆಟ್ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈಗಿರುವ ಕಾನೂನಿನ ಲೋಪದೋಷಗಳನ್ನು ಸರಿಪಡಿಸಲಿದ್ದಾರೆ ಎಂದರು.
ಜಿಎಸ್‌ಟಿ ಬಗ್ಗೆ ನಡೆದ ಸಂವಾದದ ಮುಖ್ಯ ಅಂಶಗಳನ್ನು ಹಾಗೂ ಇಲ್ಲಿ ನೀಡಲಾದ ಎಲ್ಲಾ ಮನವಿಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸುವುದಾಗಿ ಶೋಭಾ ನುಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕೆ.ಉದಯಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ದ.ಕ.ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಂಚಾಲಕ ಶಾಂತಾರಾಮ ಶೆಟ್ಟಿ, ಉಡುಪಿ ಲೆಕ್ಕಪರಿಶೋಧಕರ ಸಂಘದ ನರಸಿಂಹ ನಾಯಕ್ ಉಪಸ್ಥಿತರಿದ್ದರು.
ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಇನ್ನಾ ಉದಯಕುಮಾರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







