ಎಸ್ಸಿ, ಎಸ್ಟಿ ದೌರ್ಜನ್ಯ ಪೀಡಿತರಿಗೆ ಎಫ್‌ಐಆರ್ ದಾಖಲಾದ ತಕ್ಷಣವೇ 8.25 ಲಕ್ಷ ಪರಿಹಾರ: ಎಲ್.ಮುರುಗನ್
ಬೆಂಗಳೂರು, ಅ.7: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲೆ ವಿನಾಕಾರಣ ಹಲ್ಲೆ ನಡೆಸಿ, ದೌರ್ಜನ್ಯ(ಅಟ್ರಾಸಿಟಿ) ಪ್ರಕರಣಗಳು ದಾಖಲಾದರೆ ನೊಂದವರ ಕುಟುಂಬಗಳಿಗೆ 8 ಲಕ್ಷ 25 ಸಾವಿರ ರೂ.ಪರಿಹಾರ ನೀಡಲಾಗುವುದು ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಉಪಾಧ್ಯಕ್ಷ ಎಲ್.ಮುರುಗನ್ ಹೇಳಿದ್ದಾರೆ.
ಶನಿವಾರ ನಗರದ ಕುಮಾರ ಕೃಪಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್ಸಿ, ಎಸ್ಟಿಗಳ ಮೇಲೆ ವಿನಾಕಾರಣ ದೌರ್ಜನ್ಯ ನಡೆದು ಎಫ್‌ಐಆರ್ ದಾಖಲಾದ ತಕ್ಷಣವೇ ನೊಂದವರಿಗೆ ಶೇ.50ರಷ್ಟು ಪರಿಹಾರ ಹಾಗೂ ಪೊಲೀಸರು ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಉಳಿದ ಪರಿಹಾರವನ್ನು ನೀಡಲಾಗುವುದು. ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಿದರೆ ಅಂಥವರ ವಿರುದ್ಧ ಪರಿಶಿಷ್ಟ ಜಾತಿ/ವರ್ಗಗಳ(ದೌರ್ಜನ್ಯ ನಿಯಂತ್ರಣ) 1995ರ ನಿಯಮದ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಮೂರು ವರ್ಷದಲ್ಲಿ 1912 ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದ ಅವರು, ಎಸ್ಸಿ ಮತ್ತು ಎಸ್ಟಿಗಳ ಮೇಲೆ ದೌರ್ಜನ್ಯ ನಡೆದಿರುವುದು ನ್ಯಾಯಾಲಯದಲ್ಲಿ ಸಾಬೀತಾದರೆ ಅಂಥವರ ಕುಟುಂಬಗಳಿಗೆ ಪ್ರತೀ ತಿಂಗಳು 5 ಸಾವಿರ ರೂ.ಪರಿಹಾರ, ಹಳ್ಳಿಗಳಲ್ಲಿ ಕುಟುಂಬ ವಾಸಿಸುತ್ತಿದ್ದರೆ 2 ಎಕರೆ ಜಮೀನು, ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಒಂದು ಮನೆ ಹಾಗೂ ನೊಂದವರ ಕುಟುಂಬಗಳಲ್ಲಿನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದು ಎಂದರು.
ದೇವದಾಸಿ ಪದ್ಧತಿಯನ್ನು ಹೋಗಲಾಡಿಸಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡಿದೆ. ಹಾಗೊಂದು ವೇಳೆ ದೇವದಾಸಿಯರಿಗೆ ಅಧಿಕಾರಿಗಳು ಸಮಯಕ್ಕೆ ಅನುಸಾರವಾಗಿ ಪರಿಹಾರ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳ ಮಕ್ಕಳಿಗಾಗಿ 10 ರೆಸಿಡೆನ್ಸಿ ಶಾಲೆ, ಸ್ಪರ್ಧಾ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರ ಕೊಪ್ಪಳ ಜಿಲ್ಲೆಯಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪನೆಗಾಗಿ ಎಸ್ಸಿ, ಎಸ್ಟಿಗಳಿಂದ 96 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಈ ಎಲ್ಲ ಎಸ್ಸಿ, ಎಸ್ಟಿಗಳಿಗೂ ಪರ್ಯಾಯ ಜಮೀನನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.







