ಬ್ಲೂ ವೇಲ್ ಚಾಲೆಂಜ್ ಆನ್‌ಲೈನ್ ಗೇಮ್: ವಿದ್ಯಾರ್ಥಿಗಳನ್ನು ದೂರವಿಡಲು ಶಿಕ್ಷಣ ಇಲಾಖೆ ಕ್ರಮ

ಬೆಂಗಳೂರು, ಅ.7: ಅಂತರ್ಜಾಲ ತಾಣಗಳಲ್ಲಿ ಅನಾರೋಗ್ಯಕರ ಆನ್‌ಲೈನ್ ಆಟಗಳಿಂದ ದೂರವಿರುವಂತೆ ಮತ್ತು ವೆಬ್‌ಸೈಟ್‌ಗಳನ್ನು ಬಳಕೆ ಮಾಡದಂತೆ ಎಚ್ಚರವಹಿಸುವುದು ಇಲಾಖೆಯ, ಪೋಷಕರ, ಸಂಘ ಸಂಸ್ಥೆಗಳ ಮತ್ತು ಕಾಲೇಜಿನ ವ್ಯವಸ್ಥಾಪಕ ಮಂಡಳಿಗಳ ಆದ್ಯ ಕರ್ತವ್ಯವಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಇಲಾಖೆ, ಬ್ಲೂವೇಲ್ ಚಾಲೆಂಜ್ ಎಂಬ ಆನ್‌ಲೈನ್ ಗೇಮ್‌ನಿಂದ ಕಾಲೇಜು ಮಕ್ಕಳು ಪ್ರಚೋದನೆಗೊಂಡು ಅಂತಿಮವಾಗಿ ಆತ್ಮಹತ್ಯೆಗೆ ಈಡಾಗುತ್ತಿರುವ ಬಗ್ಗೆ ಹಲವು ದಿನಗಳಿಂದ ಎಲ್ಲ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ ಹಾಗೂ ರಾಜ್ಯದ ಎಲ್ಲ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ವರದಿಗಳನ್ನು ಪ್ರಕಟಿಸಿ, ಪ್ರಸಾರ ಮಾಡುವ ಮೂಲಕ ಸುದ್ದಿ ಮಾಧ್ಯಮಗಳು ಕಾಲೇಜು ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಉಪ ನಿರ್ದೇಶಕರು, ತಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಮಕ್ಕಳಿಗೆ ಅರಿವು ಮತ್ತು ಜಾಗ್ರತೆ ಮೂಡಿಸಲು ಹಾಗೂ ಅಂತರ್ಜಾಲ ತಾಣಗಳಲ್ಲಿ ಈ ರೀತಿ ಅನಾರೋಗ್ಯಕರ ಆಟಗಳಿಂದ ದೂರವಿರುವಂತೆ ಮತ್ತು ವೆಬ್‌ಸೈಟ್‌ಗಳನ್ನು ಬಳಕೆ ಮಾಡದಂತೆ ವಿದ್ಯಾರ್ಥಿಗಳಿಗೆ ತಿಳಿಸುವುದು ಶಿಕ್ಷಕರ ಹಾಗೂ ಪೋಷಕರ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಮಕ್ಕಳ ನಡವಳಿಕೆ ಕುರಿತು ಗಮನಹರಿಸಬೇಕಾದ ಅಂಶ: ಮಗುವಿನ ಶರೀರದಲ್ಲಿ ಅಸಾಮಾನ್ಯ ಚಿಹ್ನೆಗಳು ಮತ್ತು ಗಾಯದ ಗುರುತುಗಳು ವಿಶೇಷವಾಗಿ ತೋಳು ಮತ್ತು ತುಟಿಗಳಲ್ಲಿ ಕಾಣಿಸಿಕೊಂಡಾಗ. ಮಗು ಬಹಳ ಸಮಯದವರೆಗೆ ಹೆದರುವ (ಹಾರರ್) ಚಲನಚಿತ್ರ ನೋಡುತ್ತಿರುವಾಗ, ಮಗು ಅಸ್ವಾಭಾವಿಕ ಸಮಯದಲ್ಲಿ ಅಂದರೆ ಮುಂಜಾನೆ 4.20ಕ್ಕೆ ಸರಿಯಾಗಿ ಏಳುತ್ತಿದ್ದರೆ, ಮಗು ವಿಚಿತ್ರವಾದ ಸಂಗೀತ ಕೇಳುತ್ತಿದ್ದರೆ, ಮಗು ಸಾಮಾಜಿಕ ಜಾಲತಾಣಗಳಲ್ಲಿ ಖಿನ್ನತೆಗೊಳಗಾದ ಸಂದೇಶ ಮತ್ತು ಸೆಲ್ಫಿಗಳನ್ನು ಪೋಸ್ಟ್ ಮಾಡುತ್ತಿದೆಯೇ ಎಂಬ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಪ್ರತೀ ಮಕ್ಕಳ ಬಗ್ಗೆ ವಿಶೇಷ ಗಮನವನ್ನು ಹರಿಸಬೇಕು.
ಉಪ ನಿರ್ದೇಶಕರು ಹಾಗೂ ಪ್ರಾಂಶುಪಾಲರು ಕೈಗೊಳ್ಳಬೇಕಾದ ಕ್ರಮ: ಮಕ್ಕಳೊಂದಿಗೆ ಆತ್ಮೀಯ ವಾತಾವರಣ ಸೃಷ್ಟಿಸುವ ಮೂಲಕ ಬ್ಲೂವೇಲ್ ಚಾಲೆಂಜ್ ಆಟದ ದುಪ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ವ್ಯಾಪಕ ಪ್ರಚಾರವನ್ನು ಹಮ್ಮಿಕೊಂಡು, ಮಕ್ಕಳಿಗೆ ಪ್ರತಿದಿನ ತಿಳುವಳಿಕೆ ನೀಡಬೇಕು. ಸೈಬರ್ ಕೆಫೆ ಮತ್ತು ಅಂತರ್ಜಾಲ ತಾಣಗಳಿಂದ ಈ ರೀತಿಯ ಅನಾರೋಗ್ಯಕರ ಚಟುವಟಿಕೆಗಳಿಂದ ದೂರವಿರುವಂತೆ ಮಕ್ಕಳಿಗೆ ತಿಳಿಸಬೇಕು. ಈ ಬಗ್ಗೆ ಪೋಷಕರಲ್ಲಿಯೂ ಜಾಗೃತಿ ಮೂಡಿಸಲು ಆಂದೋಲನವನ್ನು ರೂಪಿಸಬೇಕು. ರಾಜ್ಯಾದ್ಯಂತ ಎಲ್ಲ ಉಪ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರಪತ್ರ, ಬ್ಯಾನರ್, ಪತ್ರಿಕಾ ಪ್ರಕಟನೆ ಮುಖಾಂತರ ವ್ಯಾಪಕವಾದ ಪ್ರಚಾರವನ್ನು ಹಮ್ಮಿಕೊಳ್ಳಬೇಕು. ಈ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ನೀಡಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದಿದೆ.
ಬ್ರೌಸಿಂಗ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ಬ್ಲೂವೇಲ್ ಚಾಲೆಂಜ್ ಆಟ ಆಡಲು ಅವಕಾಶ ಕಲ್ಪಿಸದಂತೆ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಕ್ರಮ ಕೈಗೊಳ್ಳುವ ವ್ಯವಸ್ಥೆ ಮಾಡಿಸಬೇಕು. ಈ ರೀತಿಯ ಅನಾರೋಗ್ಯಕರ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವಲ್ಲಿ ಜಿಲ್ಲಾಡಳಿತದ ಸಹಕಾರ ಪಡೆದು, ಉಪ ನಿರ್ದೇಶಕರು ಹಾಗೂ ಕಾಲೇಜಿನ ಸಂಸ್ಥೆಯವರು, ಪ್ರಾಂಶುಪಾಲರು, ಶಿಕ್ಷಕರು ಬ್ಲೂ ವೇಲ್ ಚಾಲೆಂಜ್ ಎಂಬ ಅನಾರೋಗ್ಯಕರ ಅಂತರ್ಜಾಲ ಆಟದಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿ ಪದಪೂರ್ವ ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.







