ನಾಲ್ವರು ರೈತರಿಗೆ ವೀರೇಶ್ ದತ್ತಿನಿಧಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಅ.7: ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ನಾಲ್ವರು ರೈತರಿಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯದ ಅಲುಮ್ನಿ ಅಸೋಸಿಯೇಶನ್ ಶನಿವಾರ ಡಾ.ಜಿ.ಕೆ.ವೀರೇಶ್ ದತ್ತಿನಿಧಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೈತರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಚ್.ಸದಾನಂದ, ರಾಯಚೂರು ಜಿಲ್ಲೆಯ ರಾಮಕೃಷ್ಣ, ಶಿವಮೊಗ್ಗ ಜಿಲ್ಲೆಯ ದುರ್ಗಪ್ಪ ಅಂಗಡಿ ಹಾಗೂ ಉಡುಪಿ ಜಿಲ್ಲೆಯ ಶಬರೀಶ ಸುವರ್ಣ ಅವರಿಗೆ ತಲಾ 25 ಸಾವಿರ ರೂ.ನಗದು, ಪ್ರಶಸ್ತಿ, ಪದಕವನ್ನು ನೀಡಿ ಗೌರವಿಸಲಾಯಿತು.
ಅಲುಮ್ನಿ ಅಸೋಸಿಯೇಶನ್ ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಪ್ರತಿವರ್ಷ ನೀಡಲಾಗುವ ಪ್ರಶಸ್ತಿಗೆ ಕೃಷಿಕರನ್ನು ಆಯ್ಕೆ ಮಾಡಲು ನಾಲ್ಕು ವಿಭಾಗಗಳಲ್ಲಿ ಸುತಿಗಳನ್ನು ರಚಿಸುವ ಮೂಲಕ ರಾಜ್ಯದ ನಾನಾ ವಿಭಾಗಗಳಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿ, ವಿವಿಧ ಬೆಳೆಗಳನ್ನು ಬೆಳೆದು, ಅಲ್ಪನೀರು ಬಳಕೆ, ಯಂತ್ರೋಪಕರಣ ಬಳಕೆ, ಕಡಿಮೆ ವೆಚ್ಚ ಹೀಗೆ ಉತ್ತಮ ಪದ್ಧತಿಗಳನ್ನು ಅನುಸರಿಸಿ ಹೈನುಗಾರಿಕೆ, ಪಶುಸಂಗೋಪನೆ, ಜೇನು ಸಾಕಾಣೆ, ವಿವಿಧ ಬೆಳೆಗಳಾದ ಸಿರಿಧಾನ್ಯ, ತೆಂಗು, ಮಾವು, ಅಡಿಕೆ, ಮೆಣಸು, ತರಕಾರಿ ಹೀಗೆ ವರ್ಷ ಪೂರ್ತಿ ಆದಾಯ ಬರುವಂತಹ ಕಡಿಮೆ ಖರ್ಚಿನ ಬೆಳೆ ಬೆಳೆಯುವುದರ ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಒಟ್ಟು ಕುಟುಂಬದ ಸದಸ್ಯರೆಲ್ಲರೂ ದುಡಿಯುವುದು, ಇತರೆ ರೈತರಿಗೆ ಸಮಗ್ರ ಕೃಷಿ ಬಗ್ಗೆ ತಿಳುವಳಿಕೆ ಮೂಡಿಸುವುದು, ತರಬೇತಿ ಏರ್ಪಡಿಸುವುದು ಸೇರಿದಂತೆ ಕೃಷಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ ರಾಜ್ಯದ ನಾಲ್ವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷ ಡಾ.ನಾರಾಯಣಗೌಡ ವಹಿಸಿದ್ದರು. ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಆರ್.ಧ್ರುವನಾರಾಯಣ, ಕೃಷಿ ವಿವಿ ಕುಲಪತಿ ಡಾ.ಎಚ್.ಶಿವಣ್ಣ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಪಿ.ಮೋಹನ್, ದತ್ತಿ ನಿಧಿ ಸ್ಥಾಪಕ ಡಾ.ಜಿ.ಕೆ.ವೀರೇಶ್ ಮತ್ತಿತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





