ಗಾಂಜಾ ಮಾರಾಟ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಮಂಗಳೂರು, ಅ. 7: ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಗಾಂಜಾ ಸೇವನೆ ಮಾಡುತ್ತಿದ್ದ ತಲಪಾಡಿಯ ಎಸ್.ಕೆ. ಮನ್ಸೂರ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಹೆನ್ರಿ ಬಾಲ ಯಾನೆ ಬಾಲಕೃಷ್ಣ ಪೂಜಾರಿ ತಲಪಾಡಿ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಬಾಲಕೃಷ್ಣ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೊಳಲಿ ಕಮಲಾಕ್ಷ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಅಲ್ಲದೆ ಈ ಹಿಂದೆ ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಚರಸ್ ಮಾರಾಟ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿಗಳನ್ನು ನಗರದ ಹೊರವಲಯದ ತಲಪಾಡಿ ಟೋಲ್ ಗೇಟ್ ಬಳಿ ಬಂಧಿಸಲಾಗಿದೆ. ಆರೋಪಿಗಳಿಂದ 110 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟ ಮಾಡಿದ ರೂ. 400 ನಗದು ಹಣವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ನಿರ್ದೇಶನದಲ್ಲಿ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್, ಸಿಬ್ಬಂದಿಗಳಾದ ಜಗದೀಶ್, ಶಾಜು ನಾಯರ್, ಕಿಶೋರ್ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





