ದೇಶದಲ್ಲಿ ನಿರುದ್ಯೋಗಿಗಳಿಲ್ಲ, 'ನಿರುದ್ಯೋಗಿಗಳು' ಎಂಬ ಶಬ್ದ ಬಳಸಬೇಡಿ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಬೆಂಗಳೂರು, ಅ. 7: ನಮ್ಮ ದೇಶದಲ್ಲಿ ಯಾರೂ ನಿರುದ್ಯೋಗಿಗಳಿಲ್ಲ, ಅವರ್ಯಾರು ಹಸಿವಿನಿಂದಲೂ ಇಲ್ಲ. ಇಲ್ಲಿ ಇರುವುದು ಉದ್ಯೋಗ ಆಕಾಂಕ್ಷಿಗಳು ಮಾತ್ರ. ಹೀಗಾಗಿ ಇನ್ನು ಮುಂದೆ ಯಾರೂ ‘ನಿರುದ್ಯೋಗಿಗಳು’ ಎಂಬ ಶಬ್ದವನ್ನು ಬಳಸಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.
ಶನಿವಾರ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಹಾಗೂ ಕೌಶಲ್ಯಾಭಿವೃದ್ಧಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಹೇಳುವುದು ನೇರವಾಗಿರಬಹುದು. ಆದರೆ, ನಾವು ಕಲಿತಿದ್ದಕ್ಕೂ, ನಾವು ಉದ್ಯೋಗ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಹೀಗಾಗಿಯೆ ಪ್ರಧಾನಿ ನರೇಂದ್ರ ಮೋದಿಯವರು ಕೌಶಲ್ಯ ಯೋಜನೆ ಜಾರಿಗೆ ತಂದಿದ್ದಾರೆ. ದೇಶದಲ್ಲಿ ಉದ್ಯೋಗ ಸಿಗದವರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಪ್ರತಿವರ್ಷ 1.96ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿದೆ. ಇಂದು ನಮಗೆ ಅವಕಾಶ ಸಿಗಲಿಲ್ಲ ಎಂದರೆ ಮುಂದೆ ದೊಡ್ಡ ಅವಕಾಶ ಕಾದಿದೆ ಎಂದೇ ಅರ್ಥ. ಹೀಗಾಗಿ ರಕ್ತ ಚೆಲ್ಲದೆ ಯುದ್ಧವನ್ನ, ಬೆವರು ಚೆಲ್ಲದೆ ಬದುಕನ್ನ ಗೆಲ್ಲುಲು ಸಾಧ್ಯವಿಲ್ಲ. ಶ್ರಮವಿಲ್ಲದ ಬದುಕು ಬದುಕೇ ಅಲ್ಲ. ಅದು ಲಾಟರಿ ಹೊಡೆದಂತೆ ಆಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಇನ್ನಿತರರ ಮುಖಂಡರು ಪಾಲ್ಗೊಂಡಿದ್ದರು.
ನಿರುದ್ಯೋಗಿಗಳ ಅಪಹಾಸ್ಯ ಅಕ್ಷಮ್ಯ
ಪ್ರತಿವರ್ಷ 1ಕೋಟಿ ಉದ್ಯೋಗ ಸೃಷ್ಟಿಸುವ ಕೇಂದ್ರದ ಘೋಷಣೆ ಸಂಪೂರ್ಣ ಸುಳ್ಳಾಗಿದೆ. ಇದೀಗ ಕೌಶಲ್ಯಾಭಿವೃದ್ಧಿ ನೆಪದಲ್ಲಿ ಖಾಸಗಿ ಕಂಪೆನಿ ಹಣದ ದಂಧೆಗೆ ಕೇಂದ್ರ ಸರಕಾರ ಕುಮ್ಮಕ್ಕು ನೀಡಲಾಗುತ್ತದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ 8 ಸಾವಿರಕ್ಕೂ ಅಧಿಕ ಮಂದಿ ನಿರುದ್ಯೋಗಿ ಯುವಜನರು ಬೆಳಗ್ಗೆಯಿಂದಲೇ ಬಿಸಿಲಿನಲ್ಲೆ ಒಣಗಿದ್ದಾರೆ. ಸಂಜೆ ವರೆಗೂ ಕಾಯಿಸಿ ಬಿಜೆಪಿ ಪ್ರಚಾರದ ಬಳಿಕ 400ಮಂದಿಗಷ್ಟೇ ಉದ್ಯೋಗ ಪತ್ರ ನೀಡಲಾಗಿದೆ. ಮಾತ್ರವಲ್ಲ, ಕೇಂದ್ರ ಸಚಿವರು ನಿರುದ್ಯೋಗಿಗಳನ್ನು ಅಪಹಾಸ್ಯ ಮಾಡಿದ್ದು ಅಕ್ಷಮ್ಯ.
-ಮುತ್ತುರಾಜ್, ಸಂಚಾಲಕ ಉದ್ಯೋಗಕ್ಕಾಗಿ ಯುವಜನರು







