ಗೋವಾ ಶಾಲೆಯಲ್ಲಿ ಪ್ರಧಾನಿ, ರಾಷ್ಟ್ರಪತಿ ಭಾವಚಿತ್ರ ಕಡ್ಡಾಯ

ಪಣಜಿ, ಅ. 7: ದೀಪಾವಳಿ ರಜೆಯ ಬಳಿಕ ಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾವಚಿತ್ರಗಳನ್ನು ಅಳವಡಿಸುವಂತೆ ಗೋವಾದ ಶಿಕ್ಷಣ ಸಚಿವ ರಾಜ್ಯದ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯೊಂದಿಗೆ ಇತ್ತೀಚೆಗೆ ನಡೆಸಲಾದ ಸಭೆಯ ವೇಳೆ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನೀಡಿದ ಸೂಚನೆಯ ಒಂದು ಭಾಗವಾಗಿ ಶಿಕ್ಷಣ ಇಲಾಖೆ ಈ ಸೂಚನೆ ನೀಡಿದೆ.
ಶಾಲೆಯ ಆವರಣದಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರ ಭಾವಚಿತ್ರ ಅಳವಡಿಸುವಂತೆ ಅನುದಾನಿತ ಹಾಗೂ ಸರಕಾರಿ ಶಾಲೆಗಳ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಅರಿತುಕೊಳ್ಳಲು ಮಹಾತ್ಮಾ ಗಾಂಧಿ, ಬಿ.ಆರ್. ಅಂಬೇಡ್ಕರ್, ಪ್ರಧಾನಿ, ರಾಷ್ಟ್ರಪತಿಯವರ ಭಾವಚಿತ್ರಗಳನ್ನು ಶಾಲೆಯಲ್ಲಿ ಅಳವಡಿಸುವುದನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಕಡ್ಡಾಯಗೊಳಿಸಿರುವ ಒಂದು ಭಾಗವಾಗಿ ಈ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರ ಹೆಸರು ತಿಳಿದಿಲ್ಲ. ಇದು ಶಿಕ್ಷಣ ಚಟುವಟಿಕೆಯ ಒಂದು ಭಾಗ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.







