ಮತೀಯವಾದಕ್ಕೆ ದಕ್ಷಿಣ ಭಾರತದಲ್ಲಿ ನೆಲೆಯಿಲ್ಲ: ಸಿ.ಎಂ.ಇಬ್ರಾಹೀಂ

ಬೆಂಗಳೂರು, ಅ.7: ದಕ್ಷಿಣ ಭಾರತದಲ್ಲಿ ಜಾತಿವಾದ, ಮತೀಯವಾದಗಳಿಗೆ ನೆಲೆ ಸಿಗುವುದಿಲ್ಲ. ಈ ಸತ್ಯವನ್ನು ಬಿಜೆಪಿಯವರು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿಯ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಮ್ಮಿಕೊಂಡಿದ್ದ ರ್ಯಾಲಿ, ಪಾದಯಾತ್ರೆಗೆ ಜನ ಬೆಂಬಲ ಸಿಗಲಿಲ್ಲ. ಇದರಿಂದ, ಅವರು ರ್ಯಾಲಿಯನ್ನು ಅರ್ಧಕ್ಕೆ ಕೈ ಬಿಟ್ಟು ಹೋಗಿದ್ದಾರೆ ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಪ್ರಕಾಶ್ ರೈಗೆ ‘ಶಿವರಾಮಕಾರಂತ ಪ್ರಶಸ್ತಿ’ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಘಪರಿವಾರ ಹಾಗೂ ಬಿಜೆಪಿಯ ವಿರುದ್ಧ ಕಿಡಿಗಾರಿದ ಅವರು, ಸತ್ಯ ಹೇಳುವವರನ್ನು ಕಾಂಗ್ರೆಸ್ ಏಜೆಂಟ್ ಹಾಗೂ ಅಸಮರ್ಥರು ಎಂದು ಬಿಂಬಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪದೇ ಪದೇ ಹೇಳುತ್ತಿದ್ದಾರೆ. ಹಾವು ಇದೆ ಎಂದು ಖಾಲಿ ಬುಟ್ಟಿ ತೋರಿಸುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಿದ್ದರೆ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರಮೋದಿಯವರ ‘ಮನ್ ಕೀ ಬಾತ್’ನಿಂದ ಜನ ಬೇಸತ್ತಿದ್ದಾರೆ. ಈಗ ಜನರು ನಮ್ಮ ಸರಕಾರದ ‘ಕಾಮ್ ಕೀ ಬಾತ್’ ಕೇಳುತ್ತಿದ್ದಾರೆ. ಬಿಜೆಪಿಯು ನೆಲಕಚ್ಚುವ ಪರಿಸ್ಥಿತಿಯಲ್ಲಿರುವುದರಿಂದ ಆ ಪಕ್ಷದ ನಾಯಕರು ಹತಾಶರಾಗಿದ್ದಾರೆ ಎಂದರು.
ಬಿಜೆಪಿಯಲ್ಲಿ ಸೂಟ್‌ಕೇಸ್ ರಾಜಕಾರಣವಿದೆ ಎಂದು ಮಾಜಿ ಸಂಸದ ವಿಜಯಶಂಕರ್ ನೀಡಿರುವ ಹೇಳಿಕೆ ಸತ್ಯವಾಗಿದೆ. ಬಿಜೆಪಿಯಲ್ಲಿ ಯಾರು ಸತ್ಯ ಹೇಳುವುದಿಲ್ಲ. ಮೊದಲ ಬಾರಿಗೆ ವಿಜಯಶಂಕರ್ ಧೈರ್ಯವಾಗಿ ಸತ್ಯ ಹೇಳಿದ್ದಾರೆ. ವಿಜಯಶಂಕರ್ ಸುಮ್ಮನೆ ಆರೋಪ ಮಾಡುವವರಲ್ಲ. ಸತ್ಯ ಹೇಳಿರುವ ಅವರನ್ನು ಮೆಚ್ಚಲೇಬೇಕು. ರಾಷ್ಟ್ರ ರಾಜಕಾರಣವೂ ಅಧೋಗತಿಗೆ ತಲುಪಿದ್ದು, ಬಿಜೆಪಿಯ ಹಿರಿಯ ನಾಯಕ ಯಶವಂತಸಿನ್ಹಾ ಅವರಂತಹ ನಾಯಕರು ಕೇಂದ್ರ ಸರಕಾರದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ ಎಂದು ಹೇಳಿದರು.







