ರಾಜ್ಯ ಸರಕಾರದ ಎಸ್ಮಾ ಜಾರಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಅ.7: ಬಿಎಂಆರ್‌ಸಿಎಲ್ ಸಿಬ್ಬಂದಿ ವಿರುದ್ಧ ರಾಜ್ಯ ಸರಕಾರ ಜಾರಿಗೊಳಿಸಿದ್ದ ಎಸ್ಮಾಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೇ ಕೇಂದ್ರ, ರಾಜ್ಯ ಸರಕಾರ ಹಾಗೂ ಬಿಎಂಆರ್‌ಸಿಎಲ್ ಎಂಡಿಗೆ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಜುಲೈ 7ರಂದು ರಾಜ್ಯ ಸರಕಾರ ಬಿಎಂಆರ್‌ಸಿಎಲ್ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬಿಎಂಆರ್‌ಸಿಎಲ್ ನೌಕರರ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು. 2002ರ ಮೆಟ್ರೋ ಕಾಯ್ದೆ ಅನ್ವಯ ರಾಜ್ಯ ಸರಕಾರಕ್ಕೆ ಎಸ್ಮಾ ಜಾರಿಗೊಳಿಸುವ ಅಧಿಕಾರ ಇಲ್ಲ, ಹೀಗಾಗಿ ರಾಜ್ಯ ಸರಕಾರ ಜಾರಿಗೊಳಿಸಿದ್ದ ಎಸ್ಮಾ ರದ್ದುಗೊಳಿಸುವಂತೆ ಬಿಎಂಆರ್‌ಸಿಎಲ್ ನೌಕರರ ಒಕ್ಕೂಟ ವಾದಿಸಿತ್ತು
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಎಸ್ಮಾ ಜಾರಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ನೀಡಿದೆ.
ಪ್ರಕರಣವೇನು: ಜೂನ್ 7ರಂದು ಮೆಟ್ರೊ ಸಿಬ್ಬಂದಿ ಹಾಗೂ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ(ಕೆಎಸ್‌ಐಎಸ್‌ಎಫ್) ಪೊಲೀಸರ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದರು. ಬಂಧನ ಖಂಡಿಸಿ ಜೂನ್ 8ರ ಬೆಳಗ್ಗೆ ನಮ್ಮ ಮೆಟ್ರೊ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಮೆಟ್ರೊ ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹಾಗೂ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ನಮ್ಮ ಮೆಟ್ರೊ ಸಿಬ್ಬಂದಿ ಜತೆ ಸಭೆ ನಡೆಸಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ರಾಜ್ಯ ಸರಕಾರ ಬಿಎಂಆರ್‌ಸಿಎಲ್ ವಿರುದ್ದ ಎಸ್ಮಾ ಕಾಯ್ದೆ ಜಾರಿ ಮಾಡಿತ್ತು.







