ರಾಜಸ್ಥಾನ: ರೈತರಿಂದ ಉಪವಾಸ ಸತ್ಯಾಗ್ರಹ

ಜೈಪುರ, ಅ. 7: ಜಮೀನಿನ ಮರು ಸಮೀಕ್ಷೆ ನಡೆಸುವ ವಿಧಾನಗಳ ಬಗ್ಗೆ ಶುಕ್ರವಾರ ಆಯೋಜಿಸಿದ ಸಭೆಯನ್ನು ಆಡಳಿತ ಮುಂದೂಡಿದ ಹಿನ್ನೆಲೆಯಲ್ಲಿ ಜೈಪುರದ ಹೊರವಲಯದ ನಿಂದರ್ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಶನಿವಾರ ಅನಿರ್ಧಿಷ್ಟಾವದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಭೂಮಿ ಬಿಟ್ಟು ಕೊಟ್ಟವರಿಗೆ ಹೆಚ್ಚುವರಿ ಪರಿಹಾರ ನೀಡಬೇಕೇ ಎನ್ನುವುದನ್ನು ಮರು ಸರ್ವೇ ನಿರ್ಧರಿಸಲಿದೆ.
ಸರಕಾರ ಮಾತು ತಪ್ಪಿದೆ. ಸಭೆ ಮುಂದೂಡಿದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಆಯ್ಕೆ ಇಲ್ಲದೆ ನಾವು ಹಿಂದಿರುಗಿದೆವು. ಆದರೆ, ನಮ್ಮ ಪ್ರತಿಭಟನೆ ತೀವ್ರಗೊಳಿಸಿದೆವು ಎಂದು ನಿಂದರ್ ಬಚಾವೋ ಕಿಸಾನ್ ಯುವ ಸಮಿತಿ ಅಧ್ಯಕ್ಷ ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.
ಪ್ರತಿಭಟನೆ ಒಂದು ಭಾಗವಾಗಿ 22 ಪುರುಷರು ಹಾಗೂ 11 ಮಹಿಳೆಯರು ಯಾವುದೇ ಆಹಾರ ತೆಗೆದುಕೊಳ್ಳದೆ ನೀರು ಮಾತ್ರ ಸೇವಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ನಿಂದರ್‌ನಲ್ಲಿ ರೈತರ ಭೂಮಿಯ ಮರು ಸಮೀಕ್ಷೆಯ ರೈತರ ಆಗ್ರಹವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಜಮೀನು ಸಮಾಧಿ ಸತ್ಯಾಗ್ರಹ
ಮನೆ ಯೋಜನೆಗಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರ ತಮ್ಮ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಮಹಿಳೆಯರು ಸೇರಿದಂತೆ ರೈತರು ತಮ್ಮನ್ನು ಭೂಮಿಯಲ್ಲಿ ಕುತ್ತಿಗೆ ವರೆಗೆ ಹುಗಿದುಕೊಂಡು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯನ್ನು ಅವರು ಜಮೀನ್ ಸಮಾಧಿ ಸತ್ಯಾಗ್ರಹ ಎಂದು ಕರೆದಿದ್ದಾರೆ.







