ಮೋದಿ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
‘ರಸ್ತೆಯ ಬದಿಯಲ್ಲಿ ಸೌದೆ ಒಲೆ ಇಟ್ಟು ಊಟ ತಯಾರಿಕೆ’
.jpg)
ಬೆಂಗಳೂರು, ಅ.7: ಕೇಂದ್ರದ ಮೋದಿ ಸರಕಾರ ಪದೇ ಪದೇ ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಬೆಂಗಳೂರು ಯುವ ಕಾಂಗ್ರೆಸ್ ಕಾರ್ಯಕರ್ತರು, ‘ರಸ್ತೆಯ ಬದಿಯಲ್ಲಿಯೇ ಸೌದೆ ಒಲೆ ಮೂಲಕ ಊಟ ತಯಾರಿಸಿ’ ವಿನೂತನವಾಗಿ ಪ್ರತಭಟನೆ ನಡೆಸಿದರು.
ಶನಿವಾರ ನಗರದ ಮೈಸೂರು ವೃತ್ತದಲ್ಲಿ ಕರ್ನಾಟಕ ಯುವ ಕಾಂಗ್ರೆಸ್‌ನ ಬೆಂಗಳೂರು ಘಟಕದ ನೂರಾರು ಕಾರ್ಯಕರ್ತರು ರಸ್ತೆಯ ಬದಿಯಲ್ಲಿ ಸೌದೆ ಒಲೆಯ ಮೂಲಕ ಅಡುಗೆ ತಯಾರಿಸಿ ಬಳಿಕ ಊಟ ಹಂಚಿ, ಕೇಂದ್ರ ಸರಕಾರ ಬೆಲೆ ಏರಿಕೆ ಕ್ರಮವನ್ನು ಖಂಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ಗೌಡ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡದೆ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದೆ. ಅಲ್ಲದೆ, ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ನಿರಂತರವಾಗಿ ಏರಿಸುತ್ತಾ ಬಡಜನರ ಜೀವನದ ಮೇಲೆ ಬರೆ ಎಳೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಲೆ ಏರಿಕೆಯನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಬೆಲೆಗಳನ್ನು ಇಳಿಸದೆ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅನ್ಯಾಯ ಮಾಡುತ್ತಿದೆ ಎಂದ ಅವರು, ಗರಿಷ್ಠ ಮುಖಬೆಲೆಯ ನೋಟು ರದ್ದು, ಜಿಎಸ್‌ಟಿ ಜಾರಯಿಂದಾಗಿ ಜನಸಾಮಾನ್ಯರಿಗೆ ಹೆಚ್ಚು ತೊಂದರೆಯಾಗಿದೆ.ಇದೀಗ ದಿನೇ ದಿನೇ ದಿನಸಿ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ದಿಢೀರ್ ಬೆಂಕಿ: ಪ್ರತಿಭಟನೆಯಲ್ಲಿ ಸೌದೆ ಒಲೆಯ ಬೆಂಕಿಯ ಕೆನ್ನಾಲಿಗೆ ಯುವ ಕಾಂಗ್ರೆಸ್‌ನ ಮಹಿಳೆ ಸೇರಿ ಕೆಲ ಕಾರ್ಯಕರ್ತರಿಗೆ ತಗುಲಿದ ಪರಿಣಾಮ, ಎಲ್ಲರಲ್ಲೂ ಆತಂಕ ಶುರವಾಯಿತು. ದಿಢೀರ್ ಬೆಂಕಿ ಹೊತ್ತಿಕೊಂಡು ಇಬ್ಬರು ಮಹಿಳೆಯರಿಗೆ ಬೆಂಕಿ ತಗುಲಿ ಸುಟ್ಟು ಗಾಯಗಳಾದವು. ಕೂಡಲೇ ಪ್ರತಿಭಟನಾ ನಿರತ ಕಾರ್ಯಕರ್ತರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ವಾಗ್ವಾದ: ಈ ವೇಳೆ ಮಾಧ್ಯಮಗಳ ಛಾಯಗ್ರಾಹಕರು ಸನ್ನಿವೇಶವನ್ನು ಸೆರೆ ಹಿಡಿಯಲು ಮುಂದಾದ ನೂಕುನುಗ್ಗಲು ಉಂಟಾಗಿ, ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ನ ಮುಖಂಡರಾದ ಬಸವನಗೌಡ ಬಾದರ್ಲಿ, ಅಮೃತ್ ಗೌಡ ಸೇರಿ ಪ್ರಮುಖರು ಉಪಸ್ಥಿತರಿದ್ದರು.







