ಇಂದ್ರ ಧನುಷ್ ಅಭಿಯಾನಕ್ಕೆ ಮೇಯರ್ ಚಾಲನೆ
ಬೆಂಗಳೂರು, ಅ. 7: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ಎಲ್ಲ ವಾರ್ಡ್‌ಗಳಲ್ಲಿನ ಎರಡು ವರ್ಷದೊಳಗಿನ ಲಸಿಕೆ ವಂಚಿತ ಎಲ್ಲ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಇಂದ್ರಧನುಷ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದನ್ನು ಬಳಸಿಕೊಳ್ಳಬೇಕೆಂದು ಬಿಬಿಎಂಪಿ ಮೇಯರ್ ಸಂಪತ್ ಕುಮಾರ್ ಕರೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು 2018ರ ಜನವರಿ ತಿಂಗಳ ಪ್ರತಿ 7ನೆ ತಾರೀಕಿನಿಂದ, ಏಳು ಕೆಲಸದ ದಿನಗಳು ಅಭಿಯಾನಾ ಕಾರ್ಯಕ್ರಮ ಇರುತ್ತದೆ ಎಂದರು.
ಈ ಮೇಲ್ಕಂಡ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಏಳು ದಿನ ಲಸಿಕಾ ಅಭಿಯಾನ ಪಾಲಿಕೆಯ ಆಸ್ಪತ್ರೆಗಳಲ್ಲಿ ನಡೆಯಲಿದೆ. ಅದರಂತೆ ಈ ವರ್ಷವು ಪಾಲಿಕೆ ವತಿಯಿಂದ ಎಲ್ಲ್ಲ ವಾರ್ಡಗಳಲ್ಲಿ ನಡೆಯಲಿದೆ ಎಂದ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಪಾಲಿಕೆ ಆರೋಗ್ಯಾಧಿಕಾರಿಗಳು ಹಾಜರಿದ್ದರು.
ಪ್ರಸಕ್ತ ಸಾಲಿನಲ್ಲಿ ಬೆಂ.ನಗರ ಜಿಲ್ಲೆಯ 63ವಾರ್ಡ್‌ಗಳಿಗೆ ಸಂಬಂಧಿಸಿದಂತೆ 973 ಗರ್ಭಿಣಿಯರಿಗೆ, ಎರಡು ವರ್ಷದ 3,190 ಲಸಿಕಾ ವಂಚಿತ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಈ ಅಭಿಯಾನ ಅತ್ಯಂತ ಪರಿಣಾಮಕಾರಿ, ಗುಣಾತ್ಮಕವಾಗಿ ನಡೆಸುವ ಮೂಲಕ 2020ರ ವೇಳೆಗೆ ಪೂರ್ಣ ಲಸಿಕೆ ಪಡೆದ ಮಕ್ಕಳ ಪ್ರಮಾಣವನ್ನು ಶೇ.90ರಷ್ಟು ಸಾಧನೆ ಮಾಡುವುದು ಮುಖ್ಯ ಗುರಿಯಾಗಿದೆ ಎಂದು ತಿಳಿಸಲಾಗಿದೆ.







