ಜಿಎಸ್‌ಟಿ ಪರಿಷ್ಕರಣೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲ: ಕಾಂಗ್ರೆಸ್

ಹೊಸದಿಲ್ಲಿ,ಅ.7: ಜಿಎಸ್‌ಟಿಯಿಂದಾಗಿ ಉಂಟಾಗಿರುವ ವ್ಯತ್ಯಯಗಳಿಗಾಗಿ ಸರಕಾರದ ಮೇಲೆ ಒತ್ತಡವನ್ನು ಮುಂದುವರಿಸಿರುವ ಕಾಂಗ್ರೆಸ್, ಜಿಎಸ್‌ಟಿ ಮಂಡಳಿಯು ಕೊಡಮಾಡಿರುವ ‘ಮಧ್ಯಂತರ ಪರಿಹಾರ’ವನ್ನು ಸ್ವಾಗತಿಸಿದೆ. ಆದರೆ ತೆರಿಗೆ ವ್ಯವಸ್ಥೆಯಲ್ಲಿನ ರಚನಾತ್ಮಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲ ಗೊಂಡಿದೆ ಎಂದು ಒತ್ತಿ ಹೇಳಿದೆ.
ಸರಳವಾದ ತೆರಿಗೆ ವ್ಯವಸ್ಥೆಯನ್ನು ಹೊಂದುವ ಅವಕಾಶವನ್ನು ಸರಕಾರವು ಕಳೆದುಕೊಂಡಿದೆ ಎನ್ನುವುದು ಕಹಿಸತ್ಯವಾಗಿದೆ. ಇದಕ್ಕೆ ತಾನೇ ಸೃಷ್ಟಿಸಿದ ಗೊಂದಲಗಳಲ್ಲಿ ಕಳೆದು ಹೋಗಿರುವ ಆತಂಕಭರಿತ ಸರಕಾರದ ಅದಕ್ಷತೆಯೇ ಕಾರಣವಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ ಸುರ್ಜೆವಾಲಾ ಅವರು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಅವರ ಟೀಕೆಯು ತಾನು ರೂಪಿಸಿದ್ದ ಜಿಎಸ್‌ಟಿ ಪ್ರಸ್ತಾವನೆಯ ಉದ್ದೇಶವು ಪಾರದರ್ಶಕ ಮತ್ತು ಸರಳ ತೆರಿಗೆ ವ್ಯವಸ್ಥೆಯನ್ನು ಹೊಂದುವುದಾಗಿತ್ತು ಎಂಬ ಕಾಂಗ್ರೆಸ್‌ನ ಪ್ರತಿಪಾದನೆಯನ್ನೇ ಕೇಂದ್ರಬಿಂದುವನ್ನಾಗಿಸಿಕೊಂಡಿತ್ತು.
ನಮಗೆಲ್ಲ ಗೊತ್ತಿರುವ ಅಪ್ಪಟ ಬಿಜೆಪಿ ಶೈಲಿಯಲ್ಲಿಯೇ ಜಿಎಸ್‌ಟಿ ಜಾರಿಯಿಂದಾಗಿ ಉಂಟಾಗಿದ್ದ ಕೋಲಾಹಲ,ಗೊಂದಲ ಮತ್ತು ಆರ್ಥಿಕತೆಗೆ ಉಂಟಾದ ನಷ್ಟವನ್ನು ಒಪ್ಪಿಕೊಳ್ಳಲು ಸಹ ಅವರು(ಸರಕಾರ) ಆರಂಭದಲ್ಲಿ ನಿರಾಕರಿಸಿದ್ದರು ಎಂದು ಸುರ್ಜೆವಾಲಾ ಹೇಳಿದರು.





