ಝುಬೈರ್ ಕುಟುಂಬಕ್ಕೆ ಸರಕಾರ ಪರಿಹಾರ ಒದಗಿಸಬೇಕು: ಮುನೀರ್ ಕಾಟಿಪಳ್ಳ
ಮಂಗಳೂರು, ಅ. 7: ಮಾದಕ ಪದಾರ್ಥ ಮಾರಾಟ ಜಾಲದ ಕೆಂಗಣ್ಣಿಗೆ ಗುರಿಯಾಗಿ ಕೊಲೆಯಾದ ಝುಬೈರ್ ಪ್ರಕರಣದಲ್ಲಿ ನ್ಯಾಯ ದೊರಕಬೇಕು, ಕುಟುಂಬಕ್ಕೆ ಸರಕಾರ ಪರಿಹಾರ ಒದಗಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಅದೇ ಸಂದರ್ಭ ಸಂಸದ ನಳಿನ್ ಕುಮಾರ್ ಸಹಿತ ಬಿಜೆಪಿ ಝುಬೈರ್ ಕೊಲೆ ಪ್ರಕರಣದಲ್ಲಿ ರಾಜಕೀಯ ಮೇಲಾಟ ನಡೆಸುವುದನ್ನು ಕೈಬಿಟ್ಟು ಗಾಂಜಾ ಸಹಿತ ಡ್ರಗ್ಸ್ ಮಾಫಿಯಾ ಈ ಮಟ್ಟಕ್ಕೆ ಬೆಳೆಯಲು ತಮ್ಮ ಪಕ್ಷ ಮತ್ತದರ ಹಿಂದಿನ ಸರಕಾರದ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳು, ಗಾಂಜಾ, ಡ್ರಗ್ಸ್, ಗ್ಯಾಂಬ್ಲಿಂಗ್, ಮರಳು ಮಾಫಿಯಾ ಸಹಿತ ಸಮಾಜಘಾತುಕ ಶಕ್ತಿಗಳು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಅಷ್ಟೇ ಅಲ್ಲ, ಬಿಜೆಪಿಯ ಕೊಡುಗೆಯೂ ಇರುವುದು ಮುಚ್ಚಿಡಲಾಗದ ಸತ್ಯ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲೂ ಗಾಂಜಾ, ಅಫೀಮು ಮಾರಾಟ ಈಗಿನಷ್ಟೇ ವ್ಯಾಪಕವಾಗಿ ನಡೆಯುತ್ತಿತ್ತು. ಮುಸ್ಲಿಮರ ಹಲವು ಕೊಲೆಗಳು ನಡೆದಾಗ ಮೌನ ವಹಿಸಿದ್ದ, ಮುಸ್ಲಿಮರ ಮೇಲಿನ ದಾಳಿ, ಹಲ್ಲೆಗಳಲ್ಲಿ ಭಾಗವಹಿಸಿದವರಿಗೆ ಪಕ್ಷದಲ್ಲಿ ಸ್ಥಾನಮಾನ, ಕಾನೂನು, ರಾಜಕೀಯ ನೆರವು ನೀಡಿದ್ದ ಬಿಜೆಪಿ ಈಗ ತನ್ನ ಪಕ್ಷದ ಅಲ್ಪಸಂಖ್ಯಾತ ಘಟಕವನ್ನು ಮುಂದೆ ಬಿಟ್ಟು ಪ್ರತಿಭಟನೆ ನಡೆಸುತ್ತಿರುವುದು, ಝುಬೈರ್ ಕುಟುಂಬದ ಕುರಿತು ಅಪಾರ ಕಾಳಜಿ ವಹಿಸುತ್ತಿರುವುದು ನಾಟಕವಲ್ಲದೆ ಮತ್ತೇನಲ್ಲ. ಇಂತಹ ರಾಜಕೀಯ ದುರುದ್ದೇಶದ ಪ್ರತಿಭಟನೆಗಳಿಂದ ಡ್ರಗ್ಸ್ ಮಾಫಿಯಾವನ್ನು ಹತ್ತಿಕ್ಕಲಾಗದು ಎಂದು ಮುನೀರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆರ್‌ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾದಾಗ ಯಾವ ಪ್ರತಿಕ್ರಿಯೆಯನ್ನೂ ನೀಡದ, ಕೊಲೆಯ ಸೂತ್ರಧಾರಿ ಎಂದು ಗುರುತಿಸಲ್ಪಟ್ಟ ನರೇಶ್ ಶೆಣೈ ಪರ ನಿಂತ, ಜೊತೆಯಾಗಿ ಕಾಣಿಸಿಕೊಂಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಝುಬೈರ್ ಕೊಲೆಯ ಕುರಿತು ಮಾತಾಡಲು, ಸಚಿವ ಖಾದರ್ ರನ್ನು ಪ್ರಶ್ನಿಸಲು ನೈತಿಕ ಹಕ್ಕಿಲ್ಲ ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿವ ಖಾದರ್ ಈಗಲಾದರೂ ಎಚ್ಚೆತ್ತುಕೊಳ್ಳಲಿ. ಮಾಫಿಯಾಗಳ ಜೊತೆಗಿರುವವರನ್ನು ದೂರವಿಡಲಿ. ದಕ್ಷ ಪೊಲೀಸರನ್ನು ಆಯಕಟ್ಟಿನ ಜಾಗಗಳಿಗೆ ನೇಮಿಸಿ ಕ್ರಿಮಿನಲ್ ಗಳನ್ನು ಮಟ್ಟಹಾಕಲಿ. ಸಮಾಜದ ಹಿತಕ್ಕಾಗಿ ಧ್ವನಿಯಾಗಿ ಕೊಲೆಯಾದ ಝುಬೈರ್‌ರ ಅನಾಥ ಕುಟುಂಬಕ್ಕೆ ಗರಿಷ್ಠ ಪರಿಹಾರ ಒದಗಿಸುವ ಮೂಲಕ ಆಗಿರುವ ಅನಾಹುತವನ್ನು ಸರಿಪಡಿಸಲು ಖಾದರ್ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.







