ಐಸಿಸ್‌ನೊಂದಿಗೆ ಸಂಬಂಧವಿದೆಯೆಂದು ನಾನು ಹೇಳಿಲ್ಲ: ಇಸ್ಮಾಯೀಲ್ ಶಾಫಿ
ಮಂಗಳೂರು, ಅ. 7: ಕರಾವಳಿಗೆ ಐಸಿಸ್ ಕಾಲಿಟ್ಟಿದೆಯೆಂದಾಗಲಿ, ಸಂಘಟನೆಗಳಿಗೆ ಅಥವಾ ಕೆಲವು ವ್ಯಕ್ತಿಗಳಿಗೆ ಐಸಿಸ್‌ನೊಂದಿಗೆ ಸಂಬಂಧವಿದೆಯೆಂದಾ ಗಲಿ ನಾನು ಹೇಳಿಲ್ಲ ಎಂದು ಇಸ್ಮಾಯೀಲ್ ಶಾಫಿ ತಿಳಿಸಿದ್ದಾರೆ.
ನನ್ನ ಧ್ವನಿ ಸಂದೇಶವನ್ನು ವಿಘ್ನ ಸಂತೋಷಿಗಳು ವಿಕೃತಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ಕೆರಳಿಸಲು ಯತ್ನಿಸಿದ್ದಾರೆ. ಈ ವಿಕೃತ ಸುದ್ದಿಯನ್ನೇ ಕೆಲವು ಮಾಧ್ಯಮಗಳು ಜಿಲ್ಲೆಯಲ್ಲಿ ಉಗ್ರರ ಅಡಗುದಾಣವೇ ಪತ್ತೆಯಾದಂತೆ ಸ್ಫೋಟಕ ವರದಿಗಳನ್ನು ಬಿತ್ತರಿಸಿವೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಸ್ಮಾಯೀಲ್ ಶಾಫಿ ವಿರುದ್ಧ ಕ್ರಮಕ್ಕೆ ಮನವಿ
ಕಳೆದ ಕೆಲವು ದಿನಗಳಿಂದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ‘ಮಂಗಳೂರಿನಲ್ಲಿ ಐಸಿಸ್’ ಎಂಬ ಸುದ್ದಿ ಹರಡಲು ಕಾರಣರಾಗಿರುವ ಇಸ್ಮಾಯೀಲ್ ಶಾಫಿ ಎಂಬ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಮೀಯತೆ ಅಹ್ಲೆ ಹದೀಸ್ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇವರ ಸುಳ್ಳು ಸುದ್ದಿಯಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಜಿಲ್ಲೆಗೂ, ಸಲಫಿ ಸಮೂಹಕ್ಕೂ ಕೆಟ್ಟ ಹೆಸರು ಬರುವಂತಾಗಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಸಮಾಜದಲ್ಲಿ ಶಾಂತಿ ಕದಡುವ ಇಂತಹ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.







