ಉಡುಪಿ ನಗರಸಭೆಯಿಂದ ಸ್ಪಷ್ಟನೆ
ಉಡುಪಿ, ಅ.7:ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚುವ ಸಲುವಾಗಿ ಹೆರ್ಗಾ ಗ್ರಾಮ ಮತ್ತು ಶಿವಳ್ಳಿ ಗ್ರಾಮದಲ್ಲಿ ಒಟ್ಟು 11 ಎಕರೆ ನಿವೇಶನ ಗುರುತಿಸಿದ್ದು, ಈಗಾಗಲೇ ನಗರಸಭೆಗೆ ಅರ್ಜಿ ಸಲ್ಲಿಸಿರುವವರಲ್ಲಿ 670 ಮಂದಿಯನ್ನು ಪ್ರಥಮ ಹಂತದ ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇವರ ಮುತುವರ್ಜಿಯಲ್ಲಿ ಈಗಾಗಲೇ ಸ್ಥಳವನ್ನು ಸಮತಟ್ಟುಗೊಳಿಸುವ ಹಾಗೂ ಪ್ರತ್ಯೇಕ ನಿವೇಶನವಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ನವೆಂಬರ್ ತಿಂಗಳ ಕೊನೆಯೊಳಗೆ ನಿವೇಶನವನ್ನು ಸಚಿವರು ಹಂಚಿಕೆ ಮಾಡಲಿರುವರು. ಇದಕ್ಕಾಗಿ ಉಡುಪಿ ನಗರಸಭೆ ವತಿಯಿಂದ ಯಾವುದೇ ಸಭೆ ಅಥವಾ ಚರ್ಚೆಗೆ ದಿನ ನಿಗದಿಪಡಿಸಿಲ್ಲ ಹಾಗೂ ಯಾವುದೇ ಅರ್ಜಿದಾರರೊಂದಿಗೆ ನಿವೇಶನ ಹಂಚಿಕೆ ಮಾಡುವ ಹಾಗೂ ದಾಖಲೆಪತ್ರಗಳನ್ನು ಸಲ್ಲಿಸುವ ಬಗ್ಗೆ ಸಭೆ ಕರೆದಿಲ್ಲ ಎಂದು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಪೌರಾಯುಕ್ತ ಡಿ.ಮಂಜುನಾಥಯ್ಯ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ ನಗರಸಭೆಯ ಗಮನಕ್ಕೆ ಬಂದಿರುವಂತೆ, ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ಯಾರೋ 3ನೇ ವ್ಯಕ್ತಿ ನಿವೇಶನ ಹಂಚಿಕೆಯ ಕುರಿತು ಪತ್ರ ಮುಖೇನ ಸಭೆಗೆ ಹಾಜರಾಗಲು ತಿಳಿಸಿದ್ದಾರೆ. ಆದುದರಿಂದ ಇಂತಹ ಸಭೆ ಯಲ್ಲಿ ಅರ್ಜಿದಾರರು ಭಾಗವಹಿಸಿ ಯಾವುದೇ ಹಣ ಹಾಗೂ ಇತರೆ ದಾಖಲೆ ಗಳನ್ನು ನೀಡಿ ಮೋಸ ಹೋಗದಂತೆ ಹೇಳಿಕೆಯಲ್ಲಿ ವಿನಂತಿಸಲಾಗಿದೆ. ಇದಕ್ಕೆ ನಗರಸಭೆ ಹೊಣೆಯಾಗಿರುವುದಿಲ್ಲ. ಈ ರೀತಿ ಮೋಸ ಮಾಡುವವರು ಕಂಡು ಬಂದಲ್ಲಿ ನಗರಸಭೆಯಿಂದ ಕಾನೂನು ರೀತ್ಯಾ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಮೀನಾಕ್ಷಿ ಮಾಧವ ಹಾಗೂ ಪೌರಾಯುಕ್ತ ಡಿ. ಮಂಜುನಾಥಯ್ಯ ಜಂಟಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.







