ಪ್ರಬುದ್ಧ ಭಾರತ ನಿರ್ಮಾಣಕ್ಕೆ ಯುವಜನತೆ ಜಾಗೃತರಾಗಬೇಕು: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಗೌರಿ ಲಂಕೇಶ್ ನುಡಿ ನಮನ ಕಾರ್ಯಕ್ರಮ

ಕೋಲಾರ, ಅ.7: ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವ ನಾಶವಾಗದಂತೆ, ಸಂವಿಧಾನಕ್ಕೆ ಚ್ಯುತಿ ಬಾರದಂತೆ ಯುವ ಜನತೆ ಎಚ್ಚರವಹಿಸಬೇಕು ಎಂದು ಮಾನವ ಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ಟಿ.ಚನ್ನಯ್ಯರಂಗಮಂದಿರದಲ್ಲಿ ಶನಿವಾರ ಜನಪರ ಸಂಘಟನೆಗಳ ವೇದಿಕೆ ಆಯೋಜಿಸಿದ್ದ ಗೌರಿ ಲಂಕೇಶ್ ಒಂದು ನುಡಿ ನಮನ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಏಕ ಧರ್ಮ, ಏಕ ಸಂಸ್ಕೃತಿ ಹಾಗೂ ಏಕ ಭಾಷೆ ಹೇರಿಕೆಯು ಬಹು ಸಂಸ್ಕೃತಿಯನ್ನೊಳಗೊಂಡ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದ್ದು, ಕಾಂಗ್ರೆಸ್ ಮುಕ್ತ ಭಾರತದ ಹೇಳಿಕೆಗಳು ಮುಂದೊಂದು ದಿನ ಬುದ್ಧ ಮುಕ್ತ ಭಾರತ, ದಲಿತ, ಅಲ್ಪಸಂಖ್ಯಾತ ಮುಕ್ತ ಭಾರತದೆಡೆದೆ ಕರೆದೊಯ್ಯಲಿದೆಯೆಂದು ಎಚ್ಚರಿಸಿದರು.
ಕಲ್ಬುರ್ಗಿ ಹಂತಕರನ್ನು ಪತ್ತೆ ಹಚ್ಚಲು ಅಂದಿನ ಗೃಹಸಚಿವರು ಹಾಗೂ ಗೃಹ ಇಲಾಖೆ ನಿರ್ಲಕ್ಷ್ಯ ತೋರಿದ್ದರಿಂದಲೇ ಗೌರಿ ಹತ್ಯೆಗೆ ಕಾರಣ ಎಂದು ದೂರಿದ ಅವರು, ಗೌರಿ ಲಂಕೇಶ್ ಅವರು ದಿಟ್ಟ ಪತ್ರಕರ್ತೆಯಾಗಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದ್ದರು. ಗೌರಿ ಲಂಕೇಶ್‍ರ ಹತ್ಯೆ ಕೊನೆಯ ಹತ್ಯೆಯಲ್ಲ ಎನ್ನುವುದು ನಮಗೆ ತಿಳಿದಿದೆ. ಕಲ್ಬುರ್ಗಿ ಹಂತಕರು ಬೇರೆ ರಾಜ್ಯದವರು ಆಗಿದ್ದರೂ ಹಂತಕರ ಪ್ರಾಯೋಜಕರು ನಮ್ಮವರೇ ಆಗಿರುತ್ತಾರೆ, ವಿಚಾರವಾದಿಗಳನ್ನು, ಬರಹಗಾರರನ್ನು ಮತ್ತು ಚಿಂತಕರನ್ನು ಆಯ್ಕೆ ಮಾಡಿಕೊಂಡು ಹತ್ಯೆ ಮಾಡುವುದರ ಹಿಂದೆ ಏಕ ಸೂತ್ರ, ಏಕ ಶಕ್ತಿಯ ಷಡ್ಯಂತ್ರವಿದೆ ಎಂದರು.
ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರದ ಬಗ್ಗೆ ಮಾತನಾಡುವವರಿಗೆ ದೇಶದ್ರೋಹದ ಪಟ್ಟ ಕಟ್ಟುವ ವಾತಾವರಣ ದೇಶದಲ್ಲಿದೆ, ಪ್ರಶ್ನಿಸಿ ಪ್ರತಿಭಟಿಸುವವರ ಧ್ವನಿಯನ್ನು ಅಡಗಿಸಲಾಗುತ್ತಿದೆ. ಕುರುಡು ಆರಾಧನಾ ಮನೋಭಾವ ಇದೇ ರೀತಿ ಮುಂದುವರೆದರೆ ಮೋದಿಯನ್ನು ವಿಷ್ಣುವಿನ ಹನ್ನೊಂದನೇ ಅವತಾರವಾಗಿಸಲಾಗುತ್ತದೆಯೆಂದು ವ್ಯಂಗ್ಯವಾಡಿದರು.
ದೇಶದಲ್ಲಿ ನಿರುದ್ಯೋಗ ಮಿತಿ ಮೀರಿದೆ, ಜಿಡಿಪಿ ಕುಸಿದಿದೆ, ನೋಟುಗಳ ಅಮಾನ್ಯೀಕರಣ ವಿಫಲತೆ ಕಂಡಿದೆ, ಮಾತಿನಲ್ಲೇ ಮೋಡಿ ಮಾಡುವ ಮೋದಿ ಉದಾತ್ತವಾಗಿ ಮಾತನಾಡುತ್ತಾರೆ ಅನುದತ್ತವಾಗಿ ನಡೆದುಕೊಳ್ಳುತ್ತಾರೆ, ದೇಶದ ಪ್ರಜಾಪ್ರಭುತ್ವವನ್ನು ನಿರಂಕುಶ ಪ್ರಭುತ್ವವಾಗಿ ಮಾರ್ಪಡಿಸುವ ದಾರಿಯಲ್ಲಿ ಮೋದಿ ಸಾಗುತ್ತಿದ್ದಾರೆ. ಮೋದಿಯನ್ನು ಪ್ರಜಾಸತ್ತಾತ್ಮಕ ಮನಸ್ಸಿನ ನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದರು.
ನಮ್ಮ ಭಾರತ ನಮ್ಮ ಭವಿಷ್ಯ ವಿಷಯ ಕುರಿತು ಮಾತನಾಡಿದ ಡಾ.ಎಚ್.ವಿ.ವಾಸು, ಗೌರಿ ಲಂಕೇಶ್ ಹಂತಕರು ತನಿಖೆಯಲ್ಲಿ ಪತ್ತೆಯಾಗಬೇಕಾಗಿದ್ದರೂ ಸಂಭ್ರಮಿಸಿದವರು ಯಾರೆಂಬುದು ಸ್ಪಷ್ಟವಾಗಿದೆ. ಜಾತಿ ಧರ್ಮಗಳ ದೌರ್ಜನ್ಯ ವಿರೋಧಿಸುವುದರ ಜೊತೆಗೆ ಆರ್ಥಿಕ ವಿಚಾರಗಳ ಬಗ್ಗೆಯೂ ಯುವ ಜನತೆ ಗಮನಹರಿಸಬೇಕಾಗಿದೆ. ನಿರುದ್ಯೋಗ ಕೃಷಿ ಬಿಕ್ಕಟ್ಟು ದೇಶದ ಆಪತ್ತಾಗಿದ್ದು, ವೈಚಾರಿಕ ಸಂಗ್ರಾಮಕ್ಕೆ ದೇಶವನ್ನು ಸಜ್ಜುಗೊಳಿಸಬೇಕಾಗಿದೆಯೆಂದು ವಿವರಿಸಿದರು.
ಅಧ್ಯಕ್ಷತೆವಹಿಸಿದ್ದ ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಙಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಧರ್ಮಾಂಧರ, ಮತಾಂಧರ, ಮೌಢ್ಯರ ಹಾಗೂ ಭಯೋತ್ಪಾದಕರ ಭಾರತ ನಮ್ಮ ಮುಂದಿದ್ದು, ಹಸಿವು ಮುಕ್ತ, ಮೌಢ್ಯ- ದಾರಿದ್ರ ಮುಕ್ತ ಭಾರತ ನಿರ್ಮಾಣ ಮಾಡಲು ಮತದಾರರೇ ದೇಶದ ಮಾಲೀಕರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘರ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯ ಸಲಾಲುದ್ದೀನ್‍ಬಾಬು ಹಾಜರಿದ್ದರು.ಈನೆಲ ಈಜಲ ವೆಂಕಟಾಚಪತಿ ತಂಡದಿಂದ ಕ್ರಾಂತಿ ಗೀತೆ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‍ರಿಂದ ಗೌರಿ ನೆನಪಿನ ಗೀತೆ ಗಾಯನ, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಸ್ವಾಗತಿಸಿ, ಮಾರ್ಜೇನಹಳ್ಳಿ ಬಾಬು ನಿರೂಪಿಸಿದರು.







