ಸ್ಪೇನ್‌ಗೆ ಸೋಲುಣಿಸಿದ ಬ್ರೆಝಿಲ್

ಕೊಚ್ಚಿ, ಅ.7: ಫಿಫಾ ಅಂಡರ್ -17 ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ಶನಿವಾರ ಸ್ಪೇನ್ ವಿರುದ್ಧ ಬ್ರೆಝಿಲ್ 2-1 ಅಂತರದಲ್ಲಿ ಜಯ ಗಳಿಸಿದೆ. ಶನಿವಾರ ಜವಾಹರಲಾಲ್ ನೆಹರೂ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ರೆಝಿಲ್ ತಂಡದ ಲಿನ್‌ಕಾಲಿನ್ ಮತ್ತು ಪಾವುಲಿನೊ ಅವರ ಗೋಲು ನೆರವಿನಲ್ಲಿ ಬ್ರೆಝಿಲ್ ಜಯ ಗಳಿಸಿತು. ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬ್ರೆಝಿಲ್ ಡಿಫೆಂಡರ್ ವೆಸ್ಲಿ 5ನೆ ನಿಮಿಷದಲ್ಲಿ ದಾಖಲಿಸಿದ ಸ್ವಯಂ ಗೋಲಿನಿಂದಾಗಿ ಸ್ಪೇನ್ ಖಾತೆಗೆ ಬೇಗನೇ ಗೋಲು ಜಮೆಯಾಗಿತ್ತು. ಇದರಿಂದಾಗಿ ಬ್ರೆಝಿಲ್ ಒತ್ತಡಕ್ಕೆ ಸಿಲುಕಿತ್ತು. ಆದರೆ ಲಿನ್‌ಕಾಲಿನ್ ಮತ್ತು ಪಾವುಲಿನೊ ಪ್ರಥಮಾರ್ಧದಲ್ಲೇ ತಲಾ 1 ಗೋಲು ದಾಖಲಿಸಿ ಬ್ರೆಝಿಲ್‌ಗೆ 2-0 ಮುನ್ನಡೆ ಸಾಧಿಸಲು ನೆರವಾದರು. ಸ್ಪೇನ್‌ಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪಂದ್ಯದ ಪ್ರಥಮಾರ್ಧದ 25ನೆ ನಿಮಿಷದಲ್ಲಿ ಲಿನ್‌ಕಾಲಿನ್ ಗೋಲು ದಾಖಲಿಸಿ ಗೋಲಿನ ಖಾತೆ ತೆರೆದರು. 46ನೆ ನಿಮಿಷದಲ್ಲಿ ಪಾವುಲಿನೊ ಗೋಲು ಜಮೆ ಮಾಡಿ 2-0 ಮುನ್ನಡೆಗೆ ನೆರವಾದರು.
ದ್ವಿತೀಯಾರ್ಧದಲ್ಲಿ ಬ್ರೆಝಿಲ್ ಗೋಲು ಗಳಿಸಲಿಲ್ಲ. ಆದರೆ ಎದುರಾಳಿ ಸ್ಪೇನ್‌ಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಬ್ರೆಝಿಲ್ 2-1ಅಂತರದಲ್ಲಿ ಜಯ ಗಳಿಸಿತು. ಬ್ರೆಝಿಲ್ ತಂಡ ಮುಂದಿನ ಪಂದ್ಯದಲ್ಲಿ ಉತ್ತರ ಕೊರಿಯಾ ತಂಡವನ್ನು ಎದುರಿಸಲಿದೆ. ಸ್ಪೇನ್ ತಂಡ ಮುಂದಿನ ಪಂದ್ಯದಲ್ಲಿ ನೈಜರ್ ತಂಡದ ಸವಾಲನ್ನು ಎದುರಿಸಲಿದೆ.





