ವಿಷನ್ 2025 ರಾಜ್ಯ ಸರಕಾರದ ಕನಸು: ಸಚಿವ ಮಹದೇವಪ್ಪ
ಕರ್ನಾಟಕ ಸರಕಾರ ಸ್ವರೂಪ ದರ್ಶನ 2025 ಜಿಲ್ಲಾ ಮಟ್ಟದ ಕಾರ್ಯಗಾರಕ್ಕೆ ಚಾಲನೆ

ಮೈಸೂರು, ಅ.7: ರಾಜ್ಯ 2025ಕ್ಕೆ ಹೇಗಿರಬೇಕು ಎಂಬ ಕುರಿತು ಮುನ್ನೋಟ ರೂಪಿಸಲು ಕರ್ನಾಟಕ ಸರ್ಕಾರ ಸ್ವರೂಪ ದರ್ಶನ 2025 ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಳೆದ 4 ವರ್ಷಗಳ ಆಡಳಿತಾವಧಿಯಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದೆ. ಅಂತೆಯೇ 2025ಕ್ಕೆ ರಾಜ್ಯ ಯಾವ ರೀತಿ ಇರಬೇಕು ಎಂಬ ಕುರಿತು ಈಗಿನಿಂದಲೇ ಯೋಜನೆ ರೂಪಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ಕ್ಕೆ ರಾಜ್ಯ ಹೇಗಿರಬೇಕು ಎಂಬ ಬಗ್ಗೆ ಮುನ್ನೋಟ ರೂಪಿಸಲು ಸೂಚಿಸಿದ್ದಾರೆ. ಈ ಸ್ವರೂಪ ದರ್ಶನ ರಾಜ್ಯ ಸರ್ಕಾರದ ಒಂದು ಕನಸು. ಅದನ್ನು ನನಸು ಮಾಡಲು ಎಲ್ಲಾ ವಲಯಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು. ಅಭಿವೃದ್ಧಿಗೆ ಪೂರಕವಾದ ನಿರ್ದಿಷ್ಟ ವಲಯಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಈಗಾಗಲೇ ನಗರ ಮೂಲ ಸೌಕರ್ಯ ಸ್ಮಾರ್ಟ್ ಸಿಟಿ, ಸಾಮಾಜಿಕ ನ್ಯಾಯ, ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಅಲೈಡ್ ಗ್ರಾಮೀಣಾಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಸೇವೆಗಳು, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮಾಹಿತಿ ತಂತ್ರಜ್ಞಾನ, ಆಡಳಿತ ಕಾನೂನು ಮತ್ತು ನ್ಯಾಯ ಎಂಬ 5 ವಲಯಗಳನ್ನು ಗುರುತಿಸಲಾಗಿದೆ ಎಂದರು.
ಅಭಿವೃದ್ಧಿ ಎಂದರೆ ನಗರಗಳನ್ನು ಸ್ಮಾಟ್ ಆಗಿಸುವುದು. ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದು. ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟುವುದು. ಜನತೆ ನೆಮ್ಮದಿಯಿಂದ ಜೀವಿಸುವಂತೆ ಮಾಡುವುದು. ಈ ಕೆಲಸ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಈ ಕಾರ್ಯದಲ್ಲಿ ಸಂಘಸಂಸ್ಥೆಗಳು, ಸಾರ್ವಜನಿಕರು ಸಹ ಕೈ ಜೋಡಿಸಬೇಕು. ಕೃಷಿ, ಉದ್ಯೋಗ, ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಬೇಕು. ಅಂತೆಯೇ ಸಾಮಾಜಿಕ ಅಭಿವೃದ್ಧಿಯಲ್ಲಿ ಮುಖ್ಯಪಾತ್ರವಹಿಸುವ ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕು. ಆರ್ಥಿಕ ಶಿಸ್ತನ್ನು ಇಟ್ಟುಕೊಂಡು ಅದರ ಆಧಾರದ ಮೇಲೆ ಅಭಿವೃದ್ಧಿ ಹೊಂದಬೇಕು ಎಂದ ಅವರು, 2025ಕ್ಕೆ ಜಿಲ್ಲೆ ಮಾತ್ರವಲ್ಲ ರಾಜ್ಯ ಯಾವ ರೀತಿ ಇರಬೇಕು ಎಂಬ ಅಂಶಗಳನ್ನು ವಿಷನ್ 2025 ಒಳಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ರೇಣುಕಾ ಚಿದಂಬರಂ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪಂಚಾಯತ್ ಸಿಇಒ ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಅಪರ ಜಿಲ್ಲಾಧಿಕಾರಿ ಯೋಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







