ಎರಡು ಬಾರಿಯ ಚಾಂಪಿಯನ್ ಮೆಕ್ಸಿಕೊಗೆ ಇರಾಕ್ ಸವಾಲು

ಕೋಲ್ಕತಾ, ಅ.7: ಎರಡು ಬಾರಿಯ ಚಾಂಪಿಯನ್ ಮೆಕ್ಸಿಕೊ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ರವಿವಾರ ನಡೆಯಲಿರುವ ‘ಎಫ್’ ಗುಂಪಿನ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಏಷ್ಯನ್ ಚಾಂಪಿಯನ್ಸ್ ಇರಾಕ್ ತಂಡವನ್ನು ಎದುರಿಸಲಿದೆ. 2005ರಲ್ಲಿ ಪೆರುವಿನಲ್ಲಿ ನಡೆದ ವಿಶ್ವಕಪ್‌ನ ಬಳಿಕ ಮೆಕ್ಸಿಕೊ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಆರು ವರ್ಷಗಳಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿದೆ. 2013ರಲ್ಲಿ ಯುಎಇಯಲ್ಲಿ ರನ್ನರ್-ಅಪ್ ಎನಿಸಿಕೊಂಡಿತ್ತು. ಕಳೆದ ಆವೃತ್ತಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪಿತ್ತು. ಆದರೆ, ಚಾಂಪಿಯನ್ ನೈಜೀರಿಯಾಕ್ಕೆ ಶರಣಾಗಿತ್ತು. ಈ ಬಾರಿ ನೈಜೀರಿಯಾ ಅನುಪಸ್ಥಿತಿಯಿಂದ ಮೆಕ್ಸಿಕೊ ನಿಟ್ಟುಸಿರುಬಿಟ್ಟಿದೆ.
ಮತ್ತೊಂದೆಡೆ, ಇರಾಕ್ ತಂಡ 2013ರಲ್ಲಿ ಆಡಿರುವ ಏಕೈಕ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಎಲ್ಲ ಪಂದ್ಯಗಳನ್ನು ಸೋತಿತ್ತು. ಇರಾಕ್‌ನಲ್ಲಿ ಯಾವುದೇ ಪಂದ್ಯ ಆಡದಂತೆ ಫಿಫಾ ನಿಷೇಧ ಹೇರಿದ್ದರೂ ಇರಾಕ್ ಆಟಗಾರರ ಉತ್ಸಾಹಕ್ಕೆ ಇದು ಧಕ್ಕೆಯಾಗಿಲ್ಲ. 2016ರ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಇರಾನ್ ತಂಡವನ್ನು ಮಣಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
►ಇಂಗ್ಲೆಂಡ್‌ಗೆ ಚಿಲಿ ಎದುರಾಳಿ: ಸ್ಟಾರ್ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್ ತಂಡ ರವಿವಾರ ಎಫ್ ಗುಂಪಿನ ಪಂದ್ಯದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ. ಈಗಾಗಲೇ ನ್ಯೂಝಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಜಯಿಸಿರುವ ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಾದ ಆ್ಯಂಜೆಲ್ ಗೊಮೆಸ್, ಜಾಡನ್ ಸ್ಯಾಂಚೊ ಹಾಗೂ ಫಿಲ್ ಫೋಡೆನ್ ಅವರಿದ್ದಾರೆ. ಇಂಗ್ಲೆಂಡ್ 2011ರಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿರುವುದು ಈವರೆಗಿನ ಉತ್ತಮ ಸಾಧನೆ. ಚಿಲಿ 1997ರ ಬಳಿಕ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. 2015ರಲ್ಲಿ ಆತಿಥೇಯ ತಂಡವಾಗಿ ಟೂರ್ನಿಯಲ್ಲಿ ಆಡಿತ್ತು.
►ಹೊಂಡುರಾಸ್-ಜಪಾನ್ ಹಣಾಹಣಿ: ಏಷ್ಯಾದ ಬಲಿಷ್ಠ ತಂಡ ಜಪಾನ್ ರವಿವಾರ ತನ್ನ ಮೊದಲ ಪಂದ್ಯದಲ್ಲಿ ಹೊಂಡುರಾಸ್ ತಂಡವನ್ನು ಎದುರಿಸಲಿದೆ.
1993ರಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಜಪಾನ್ 2011ರಲ್ಲಿ ಅರ್ಜೆಂಟೀನ, ಫ್ರಾನ್ಸ್,ಜಮೈಕಾಗೆ ಶಾಕ್ ನೀಡಿ ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು. ದಕ್ಷಿಣ ಅಮೆರಿಕದ ಹೊಂಡುರಾಸ್ 2007ರಿಂದ ಸತತವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯುತ್ತಾ ಬಂದಿದೆ. 2013ರಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿತ್ತು.
►ನ್ಯೂ ಕ್ಯಾಲೆಡೋನಿಯಾಕ್ಕೆ ಫ್ರಾನ್ಸ್ ಕಠಿಣ ಸವಾಲು: ಚೊಚ್ಚಲ ವಿಶ್ವಕಪ್ ಆಡುತ್ತಿರುವ ನ್ಯೂ ಕ್ಯಾಲೆಡೋನಿಯಾ ಅಂಡರ್-17 ಟೂರ್ನಿಯ ಅತ್ಯಂತ ಯಶಸ್ವಿ ತಂಡ ಫ್ರಾನ್ಸ್ ನ್ನು ರವಿವಾರ ಎದುರಿಸಲಿದೆ. ‘ಇ’ ಗುಂಪಿನಲ್ಲಿ ಫ್ರಾನ್ಸ್ ಹಾಗೂ ಜಪಾನ್ ಮುಂದಿನ ಸುತ್ತಿಗೇರುವ ಫೇವರಿಟ್ ತಂಡಗಳಾಗಿವೆ.
2001ರ ಆವೃತ್ತಿಯ ವಿಶ್ವಕಪ್ ವಿಜೇತ ತಂಡ ಫ್ರಾನ್ಸ್ 16 ವಿಶ್ವಕಪ್‌ನಲ್ಲಿ ಕೇವಲ 5 ಬಾರಿ ಸ್ಪರ್ಧಿಸಿದೆ. 2015ರಲ್ಲಿ ಅಂತಿಮ-16 ರ ಸುತ್ತಿನಲ್ಲಿ ಸೋತಿದ್ದ ಫ್ರಾನ್ಸ್ ಸತತ 2ನೆ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದೆ.
ಪಂದ್ಯಗಳು
►ಕ್ಯಾಲೆಡೋನಿಯಾ-ಫ್ರಾನ್ಸ್
ಸ್ಥಳ: ಕೊಚ್ಚಿ, ಸಮಯ:ಸಂಜೆ 5:00
►ಚಿಲಿ-ಇಂಗ್ಲೆಂಡ್
ಸ್ಥಳ: ಕೋಲ್ಕತಾ,ಸಮಯ:ಸಂಜೆ 5:00
►ಹೊಂಡುರಾಸ್-ಜಪಾನ್
ಸ್ಥಳ: ಗುವಾಹತಿ, ಸಮಯ:ರಾತ್ರಿ 8:00
►ಇರಾಕ್-ಮೆಕ್ಸಿಕೊ
ಸ್ಥಳ: ಕೋಲ್ಕತಾ, ಸಮಯ: ರಾತ್ರಿ 8:00







