ಸಂಚಾರ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೂತನ ವ್ಯವಸ್ಥೆ
.jpg)
ಹೊಸದಿಲ್ಲಿ, ಅ. 8: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಂ , ರಸ್ತೆ ಅಪಘಾತ ಮುಂತಾದ ಸಮಸ್ಯೆಗಳನ್ನು ತಕ್ಷಣವೇ ಪತ್ತೆಹಚ್ಚಿ ಸೂಕ್ತಕ್ರಮ ಕೈಗೊಳ್ಳಲು ಅನುಕೂಲವಾಗುವ ನೂತನ ವ್ಯವಸ್ಥೆಯೊಂದನ್ನು ಬಳಕೆಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ನಿರ್ಧರಿಸಿದೆ. ‘ಆಕಸ್ಮಿಕ ಘಟನೆಗಳ ನಿರ್ವಹಣೆ ವ್ಯವಸ್ಥೆ’ ಎಂದು ಕರೆಯಲಾಗುವ ಈ ವ್ಯವಸ್ಥೆಯನ್ನು ಆರಂಭದಲ್ಲಿ ಉತ್ತರಪ್ರದೇಶ ಹಾಗೂ ರಾಜಸ್ತಾನದಲ್ಲಿ ಜಾರಿಗೊಳಿಸಲಾಗುತ್ತಿದೆ.
‘ಆಕಸ್ಮಿಕ ಘಟನೆಗಳ ನಿರ್ವಹಣೆ ವ್ಯವಸ್ಥೆ’ಯು ಸೂಕ್ತ ಪ್ರಮಾಣದಲ್ಲಿ ಆ್ಯಂಬುಲೆನ್ಸ್ ನಿಯೋಜನೆ, ಕಣ್ಗಾವಲು ವಾಹನ ವ್ಯವಸ್ಥೆ, ವ್ಯವಸ್ಥಿತ ದ್ವಿಪಥ ಕ್ರೇನ್ ವ್ಯವಸ್ಥೆ ಇವುಗಳನ್ನು ಒಳಗೊಂಡಿದ್ದು ಇವನ್ನು ನಕ್ಷೆಯ ರೂಪದಲ್ಲಿ ಪ್ರಾದೇಶಿಕ ನಿಯಂತ್ರಣಾ ಕೇಂದ್ರ(ಮಾಹಿತಿ ತಂತ್ರಜ್ಞಾನ ಆಧರಿತ)ಕ್ಕೆ ಜೋಡಿಸಲಾಗುತ್ತದೆ ಮತ್ತು ಇಲ್ಲಿಂದ ಇದರ ಕಾರ್ಯವನ್ನು ನಿಯಂತ್ರಿಸಲಾಗುತ್ತದೆ.
ಉ.ಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಿಗೆ ಸಂಬಂಧಿಸಿದಂತೆ ಬಿಡ್‌ಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಮಾನದಂಡವನ್ನು ಪೂರೈಸುವ ಯಶಸ್ವಿ ‘ಬಿಡ್ಡರ್’ಗೆ ಯೋಜನೆಯನ್ನು ವಹಿಸಿಕೊಡಲಾಗುತ್ತದೆ ಮತ್ತು ಸಾಧನೆ ಆಧರಿಸಿ ಹಣ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಬೇಕಾದ ಅಗತ್ಯವಿರುವ ಕಾರಣ , ಎನ್‌ಎಚ್‌ಎಐ ವತಿಯಿಂದ ಮುಂಗಡ ಹಣದ ಅಗತ್ಯವಿದೆಯೇ ಎಂಬುದನ್ನು ಬಿಡ್ಡರ್ ಮೊದಲೇ ತಿಳಿಸುವಂತೆ ಸಲಹೆ ನೀಡಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಕಳೆದ ವರ್ಷ ರಸ್ತೆ ಅಪಘಾತದಿಂದ 52,000 ಮಂದಿ ಮೃತಪಟ್ಟಿದ್ದಾರೆ ಎಂದು ಎನ್‌ಎಚ್‌ಎಐ ತಿಳಿಸಿದ್ದು ಅಪಘಾತವಾದ ತಕ್ಷಣ ಚಿಕಿತ್ಸೆಯ ಸೌಲಭ್ಯ ದೊರಕದೆ ಗಾಯಾಳುಗಳು ಮೃತಪಟ್ಟಿರುವುದು ಮರಣ ಪ್ರಮಾಣದಲ್ಲಿ ಹೆಚ್ಚಳವಾಗಲು ಕಾರಣ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ, ನೂತನ ವ್ಯವಸ್ಥೆಯಲ್ಲಿ ಪ್ರತೀ 40ರಿಂದ 45 ಕಿ.ಮೀ. ಅಂತರದಲ್ಲಿ ಇಬ್ಬರು ರೋಗಿಗಳನ್ನು ಸಾಗಿಸುವ ಸಾಮರ್ಥ್ಯವಿರುವ ಆ್ಯಂಬುಲೆನ್ಸ್‌ಗಳನ್ನು ಹಾಗೂ ಪ್ರತೀ 100 ಕಿ.ಮೀ. ಅಂತರದಲ್ಲಿ ನಾಲ್ಕು ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತದೆ. ಅಲ್ಲದೆ 24 ಗಂಟೆಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಗಸ್ತು ವಾಹನ ವ್ಯವಸ್ಥೆಯೂ ಇಲ್ಲಿರುತ್ತದೆ. ಈ ವಾಹನ ಪ್ರತೀ ನಾಲ್ಕು ಗಂಟೆಗಳಿಗೊಮ್ಮೆ ತಮ್ಮ ಕಾರ್ಯವ್ಯಾಪ್ತಿಯ ರಸ್ತೆಯಲ್ಲಿ ಗಸ್ತು ತಿರುಗಬೇಕು. ಈ ವಾಹನದಲ್ಲಿರುವವರು ಯಾವುದೇ ಘಟನೆಯಾದರೂ ತಕ್ಷಣ ಪೊಲೀಸರಿಗೆ ಮತ್ತು ಪ್ರಾದೇಶಿಕ ಕೇಂದ್ರಕ್ಕೆ ಮಾಹಿತಿ ರವಾನಿಸಬೇಕು.
ಅಲ್ಲದೆ ರಸ್ತೆ ಮಧ್ಯೆ ಕೆಟ್ಟುನಿಲ್ಲುವ ವಾಹನದಿಂದಾಗಿ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ದುರಸ್ತಿಕಾರ್ಯ ನಿರ್ವಹಿಸಲು ತಂತ್ರಜ್ಞನ ವ್ಯವಸ್ಥೆ, ಅಗತ್ಯಬೀಳುವ ವಾಹನಸವಾರರಿಗೆ ಪೆಟ್ರೋಲ್, ಡೀಸೆಲ್, ನೀರನ್ನು ಪೂರೈಸುವುದು ಇತ್ಯಾದಿ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಅಲ್ಲದೆ ಹೆದ್ದಾರಿಯ ಸಂಚಾರ ಪರಿಸ್ಥಿತಿ ಹಾಗೂ ಇನ್ನಿತರ ಮಾಹಿತಿಯನ್ನು ಹೆದ್ದಾರಿ ಬಳಕೆದಾರರಿಗೆ ‘ಇಲೆಕ್ಟ್ರಾನಿಕ್ಸ್ ಡಿಸ್‌ಪ್ಲೇ’ ವ್ಯವಸ್ಥೆಯ ಮೂಲಕ ಪ್ರದರ್ಶಿಸಲಾಗುತ್ತದೆ.







