ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಹಲ್ಲೆ: ಡಾ.ಜಿ.ಪರಮೇಶ್ವರ್ ವಿಷಾದ

ಬೆಂಗಳೂರು, ಅ.8: ಅಡುಗೆ ಅನಿಲ ಸಿಲಿಂಡರ್ ಹಾಗೂ ದಿನಸಿ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಶನಿವಾರ ಬೆಂಗಳೂರು ನಗರ ಯುವ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ನಡೆದಿರುವ ಹಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ಬೆಂಕಿ ಅನಾಹುತ ನಡೆದಿದ್ದು, ಅದನ್ನು ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ ಎಂಬುದನ್ನು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆ ಮತ್ತು ಚಳವಳಿಗಳನ್ನು ನಡೆಸುವ ಸಂದರ್ಭಗಳಲ್ಲಿ ನಮ್ಮ ಆಹ್ವಾನದ ಮೇರೆಗೆ ಮಾಧ್ಯಮ ಮಿತ್ರರು ವರದಿ ಮಾಡಲು ಬಂದಿರುತ್ತಾರೆ. ಅವರಿಗೆ ಮುಕ್ತ ಅವಕಾಶ ಕೊಡಬೇಕಾದುದು ನಮ್ಮ ಕರ್ತವ್ಯವಾಗುತ್ತದೆ. ಆ ಫೋಟೋ ತೆಗೆಯಬಾರದು, ಇದನ್ನ ಚಿತ್ರೀಕರಿಸಬಾರದು ಎಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದಿರುವ ಪರಮೇಶ್ವರ್, ನಿನ್ನೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಘಟನೆಗೆ ಸಂಬಂಧಪಟ್ಟ ಪದಾಧಿಕಾರಿಗಳು ಮಾಧ್ಯಮ ಮಿತ್ರರಲ್ಲಿ ಕ್ಷಮೆ ಕೋರುವಂತೆ ಸೂಚನೆ ನೀಡಿರುವ ಪರಮೇಶ್ವರ್, ನಿನ್ನೆಯ ಪ್ರತಿಭಟನೆಯಲ್ಲಿ ಉಂಟಾದ ಗೊಂದಲಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಒಳಗೆ ಕೆಪಿಸಿಸಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇಲ್ಲದಿದ್ದ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.







