ಶೀಘ್ರದಲ್ಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ: ರಾಜನಾಥ್‌ಸಿಂಗ್ ಭರವಸೆ
ವಿಶ್ವಕರ್ಮ ಜಯಂತ್ಯುತ್ಸವ
.jpg)
ಬೆಂಗಳೂರು, ಅ. 8: ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಶೀಘ್ರದಲ್ಲೇ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ 9ನೆ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂ.ವರ್ಗಗಳಲ್ಲಿ ಒಟ್ಟು 109 ಜಾತಿಗಳು ಶೇ.30ರಷ್ಟು ಮೀಸಲಾತಿ ಹಂಚಿಕೆ ಮಾಡಿಕೊಳ್ಳಬೇಕಿದೆ. ಇದರಿಂದ ದುರ್ಬಲ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯ ತಪ್ಪಿಸಲು ಒಳ ಮೀಸಲಾತಿ ಅನಿವಾರ್ಯ. ಹೀಗಾಗಿ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ತಜ್ಞರ ಸಮಿತಿ ರಚಿಸಲು ಈಗಾಗಲೇ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ರಾಜ್ಯಸಭಾ ಮುಂದಿನ ಅಧಿವೇಶನದಲ್ಲಿ ಯಾರೇ ವಿರೋಧ ವ್ಯಕ್ತಪಡಿಸಿದರು ಶತಯಾಗತಯಾ ಆಯೋಗದ ಸಾಂವಿಧಾನಿಕ ಸ್ಥಾನಮಾನಕ್ಕೆ ಅನುಮೋದನೆ ನೀಡಲಾಗುವುದು ಎಂದರು.
ಸಾಮಾಜಿಕ ನ್ಯಾಯ ಎನ್ನುವುದು ಭಿಕ್ಷೆಯಲ್ಲ, ಉಡುಗೊರೆಯೂ ಅಲ್ಲ. ಅದು ಹಿಂದುಳಿದ ಜಾತಿಗಳ ಹಕ್ಕು. ಪ್ರತೀ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿದರೆ ‘ನವ ಭಾರತ ನಿರ್ಮಾಣ’ ಸಾರಗೊಳ್ಳುತ್ತದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಕರ್ಮ ವಿವಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬಂದರೆ ವಿಶ್ವಕರ್ಮ ಸಮುದಾಯ ಕೌಶಲ್ಯ ಮತ್ತು ನೈಪುಣ್ಯತೆ ಉಳುವಿಗಾಗಿ ಪ್ರತ್ಯೇಕ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭರವಸೆ ನೀಡಿದರು.
ವಿಶ್ವಕರ್ಮ ಸಮುದಾಯದ ಮೇಲೆ ಆಗುತ್ತಿರುವ ಪೊಲೀಸ್ ದೌರ್ಜನ್ಯಗಳನ್ನು ತಪ್ಪಿಸಲು ಪೂರಕವಾದ ಕಾನೂನನ್ನು ಜಾರಿಗೆ ತರಲಾಗುವುದು. ವಿಶ್ವಕರ್ಮ ಸಮುದಾಯದ ಪಂಚ ಕುಲಕಸುಬುಗಳ ಅಭಿವೃದ್ಧಿ, ಮಾರುಕಟ್ಟೆ ವಿಸ್ತರಣೆಗೆ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಹೆಚ್ಚು ಸ್ಥಾನಗಳನ್ನು ನೀಡಲಾಗುವುದು. ಹಾಸನದ ಬೇಲೂರಿನಲ್ಲಿರುವ ಚನ್ನಕೇಶವ ದೇವಾಲಯದ ಆವರಣದಲ್ಲಿ ಅಮರ ಶಿಲ್ಪಿ ಜಕಣಚಾರಿ ಪ್ರತಿಮೆಯನ್ನು ಅನಾವರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಿದ್ದರಾಮಯ್ಯ ಹಿಂದುಳಿದ ನಾಯಕರಲ್ಲ: ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂದುಳಿದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಹಿಂದುಳಿದ ನಾಯಕರಲ್ಲ. 16 ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಮಾಡಿದ ನಾನು ಎಂಎಲ್‌ಸಿ ಆಗಬಾರದು. ಆದರೆ, ಜೆಡಿಎಸ್‌ನಿಂದ ವಲಸೆ ಬಂದ ನೀವು ಕೆಲವೇ ವರ್ಷಗಳಲ್ಲಿ ಸಿಎಂ ಆಗುವುದು ಸಾಮಾಜಿಕ ನ್ಯಾಯವೇ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ ನಮ್ಮ ಸಮುದಾಯವನ್ನು ರಾಜಕೀಯವಾಗಿ ತುಳಿಯುತ್ತಲೆ ಬರಲಾಗಿದೆ. ನಾವು ಹುಟ್ಟುತ್ತಲೆ ಇಂಜಿನಿಯರ್‌ಗಳು. ಸಿದ್ದರಾಮಯ್ಯ ಒಬ್ಬರೇ ಸ್ವಾಭಿಮಾನಿಗಳಲ್ಲ, ವಿಶ್ವಕರ್ಮ ಸಮಾಜದವರು ಸ್ವಾಭಿಮಾನಿಗಳು. ವಿಶ್ವಕರ್ಮ ಸಮುದಾಯ ನಿಮ್ಮಿಂದ ದೂರಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಸೆ.17ರಂದು ದೇಶದ್ಯಾಂತ ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಹಾಗೂ ಶಿಘ್ರದಲ್ಲೇ ವಿಶ್ವಕರ್ಮ ನಿಗಮ ಸ್ಥಾಪಿಸಲು ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು. ವಿಶ್ವಕರ್ಮ ಸಮಾಜದ ಹಿತರಕ್ಷಣೆಗೆ ಕಾನೂನು ರಚಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಅವರಲ್ಲಿ ಮನವಿ ಮಾಡಿದರು.
ಈ ವೇಳೆ ನಟ ರವಿಚಂದ್ರನ್, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರಿಗೆ ವಿಶ್ವಕರ್ಮ ಪ್ರಶಸ್ತಿ ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ವಿಶ್ವಕರ್ಮ ಪೀಠಾಧಿಪತಿಗಳ ಒಕ್ಕೂಟದ ಕಾಳಹಸ್ತೇಂದ್ರ ಸ್ವಾಮಿ, ಸುಜ್ಞಾನ ಪ್ರಭುಪೀಠದ ಶಿವಸುಜ್ಞಾನ ತೀರ್ಥ ಸ್ವಾಮಿ, ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್, ಅನಂತ ಕುಮಾರ್, ಅನಂತ ಕುಮಾರ್ ಹೆಗಡೆ, ಸಂಸದರಾದ ಪಿ.ಸಿ.ಮೋಹನ್, ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿ.ಸೋಮಣ್ಣ, ನಟ ಸಾಧುಕೋಕಿಲ ಸೇರಿದಂತೆ ಇತರರು ಇದ್ದರು.
ಬೇರೇ ಪಕ್ಷಗಳ ರೀತಿ ಜಾತಿ, ಪ್ರಾದೇಶಿಕತೆ, ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಸರಕಾರ ರಚಿಸಲು ಬಿಜೆಪಿ ರಾಜಕೀಯ ಮಾಡುತ್ತಿಲ್ಲ. ಬದಲಿಗೆ ದೇಶವನ್ನು ಕಟ್ಟಲು ರಾಜಕಾರಣ ಮಾಡುತ್ತಿದೆ.
-ರಾಜನಾಥ್‌ಸಿಂಗ್, ಕೇಂದ್ರ ಗೃಹಸಚಿವ







