ಅಮಿತ್ ಶಾ ಪುತ್ರನ ಸಂಸ್ಥೆಯ ವಹಿವಾಟು 16,000 ಪಟ್ಟು ಏರಿಕೆ ಆರೋಪ
ತನಿಖೆಗೆ ಆದೇಶಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ,ಅ.8: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಒಡೆತನದ ಟೆಂಪಲ್ ಎಂಟರ್‌ಪ್ರೈಸಸ್ ಪ್ರೈ.ಲಿ.ಕುರಿತು ತನಿಖೆಗೆ ಆದೇಶಿಸುವಂತೆ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರನ್ನು ರವಿವಾರ ಆಗ್ರಹಿಸಿದೆ. ಮೋದಿಯವರು ಪ್ರಧಾನಿಯಾದ ಮತ್ತು ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾದ ಬಳಿಕ ಒಂದೇ ವರ್ಷದಲ್ಲಿ ಜಯ್ ಒಡೆತನದ ಕಂಪನಿಯ ವಹಿವಾಟು 16,000 ಪಟ್ಟು ಏರಿಕೆಯಾಗಿದೆ ಎಂಬ thewire.inನ ವರದಿಯ ಹಿನ್ನೆಲೆಯಲ್ಲಿ ಈ ಆಗ್ರಹವನ್ನು ಮಂಡಿಸಿರುವ ಕಾಂಗ್ರೆಸ್, ಮೋದಿ ಮತ್ತು ಶಾ ಅವರಿಂದ ಉತ್ತರಗಳನ್ನು ಬಯಸಿದೆಯಲ್ಲದೆ ಕಂಪನಿಯ ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಸಿಬಿಐನಿಂದ ತನಿಖೆಗೆ ಒತ್ತು ನೀಡಿದೆ.
ಎಐಸಿಸಿ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಅಧಿಕಾರದಲ್ಲಿ ಬದಲಾವಣೆಯಾದ ಬಳಿಕ ಕೆಲವು ವ್ಯಕ್ತಿಗಳ ಅದೃಷ್ಟಗಳೂ ಬದಲಾಗಿರುವಂತಿದೆ. ಜಯ್ ಶಾ ಒಡೆತನದ ಕಂಪನಿಯು 2014ರ ಬಳಿಕ ಲಾಭ ಗಳಿಸಲು ಆರಂಭಿಸಿತ್ತು ಎನ್ನುವುದನ್ನು ಕಂಪನಿಗಳ ರಿಜಿಸ್ಟ್ರಾರ್‌ಗೆ ಸಲ್ಲಿಸಲಾಗಿರುವ ದಾಖಲೆಗಳು ಬಹಿರಂಗಗೊಳಿಸಿವೆ ಎಂದರು.
"ಟೆಂಪಲ್ ಎಂಟರ್‌ಪ್ರೈಸಸ್ 2013 ಮಾರ್ಚ್ ಮತ್ತು 2014 ಮಾರ್ಚ್‌ನಲ್ಲಿ ಅನುಕ್ರಮವಾಗಿ 6,230 ರೂ. ಮತ್ತು 1,724 ರೂ. ನಷ್ಟಗಳನ್ನು ದಾಖಲಿಸಿತ್ತು. 2014-15ರಲ್ಲಷ್ಟೇ ಅದು ಲಾಭ ಗಳಿಕೆಯನ್ನು ಆರಂಭಿಸಿತ್ತು. ಅಂದರೆ 2014ರ ಮೇ ತಿಂಗಳಲ್ಲಿ ಬದಲಾವಣೆಯೊಂದು ನಡೆದಿತ್ತು ಮತ್ತು ಲಾಭಗಳಿಕೆ ಆರಂಭವಾಗಿತ್ತು. 2014-15ರಲ್ಲಿ ಅದು 18,728 ರೂ.ಲಾಭ ಗಳಿಸಿತ್ತು. ನಿಜವಾದ ಬದಲಾವಣೆ 2015-16ರಲ್ಲಿ ನಡೆದಿತ್ತು ಮತ್ತು ಅದು ಆಘಾತಕಾರಿಯಾಗಿತ್ತು. ಆ ವರ್ಷ ಕಂಪನಿಯು 80 ಕೋ.ರೂ.ಗಳ ವಹಿವಾಟು ನಡೆಸಿತ್ತು. ಕಂಪನಿಯು ಸಾಲಗಳನ್ನು ಪಡೆಯಲು ಆರಂಭಿಸಿತ್ತು. ಬಿಜೆಪಿಯ ರಾಜ್ಯಸಭಾ ಸದಸ್ಯ ಪರಿಮಳ ನಾಥ್ವಾನಿಯವರ ಮಾವ, ಕೆಐಎಫ್‌ಎಸ್ ಫೈನಾನ್ಸಿಯಲ್ ಸರ್ವಿಸಸ್ ನಡೆಸುತ್ತಿರುವ ರಾಜೇಶ ಖಂಡಾವಾಲಾ ಎನ್ನುವವರು ಜಯ್ ಶಾ ಕಂಪನಿಗೆ 15.78 ಕೋ.ರೂ.ಗಳ ಸಾಲವನ್ನು ನೀಡಿದ್ದರು ಮತ್ತು ಕಂಪನಿಯು 2016,ಅಕ್ಟೋಬರ್‌ನಲ್ಲಿ ತನ್ನ ವ್ಯವಹಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಕಂಪನಿಯು ನಷ್ಟದಲ್ಲಿದೆ ಎಂಬ ಕಾರಣವನ್ನು ಆಗ ನೀಡಲಾಗಿತ್ತು. ಇದು ನಿಜಕ್ಕೂ ವಿಚಿತ್ರ" ಎಂದು ಕಪಿಲ್ ಸಿಬಲ್ ಹೇಳಿದರು.
"ಈ ಕಂಪನಿಯು ಏಕಾಏಕಿ 80 ಕೋ.ರೂ.ಗಳ ವಹಿವಾಟು ನಡೆಸಿದ್ದು ಹೇಗೆ" ಎಂದು ಪ್ರಶ್ನಿಸಿದ ಅವರು, ಕಂಪನಿಯು ಕೃಷಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿತ್ತು ಎಂದು ತಿಳಿಸಿದರು.
"ನೀವು(ಮೋದಿ) ಸಿಬಿಐ ತನಿಖೆಗೆ ಆದೇಶಿಸುತ್ತೀರಾ?, ನೀವು ಇಡಿ ತನಿಖೆಗೆ ಆದೇಶಿಸುತ್ತೀರಾ?, ನೀವು ಅವರ ಬಂಧನಕ್ಕೆ ಸೂಚಿಸುತ್ತೀರಾ? ಏಕೆಂದರೆ ಪ್ರತಿಪಕ್ಷದ ಪ್ರಕರಣದಲ್ಲಿ ಇಡಿ ತಕ್ಷಣವೇ ನೋಟಿಸ್‌ಗಳನ್ನು ಜಾರಿಗೊಳಿಸುತ್ತದೆ ಮತ್ತು ಆರೋಪ ಹೊತ್ತವರನ್ನು ತರಾತುರಿಯಲ್ಲಿ ಬಂಧಿಸುತ್ತದೆ ಎಂದ ಸಿಬಲ್, ಇಂದು ಯಾವುದೇ ವ್ಯಕ್ತಿ ಜಯ್, ಅಮಿತ್ ಮತ್ತು ಶಾ ಹೆಸರು ಹೊಂದಿದ್ದರೆ ಅಂತಹವರನ್ನು ಬಂಧಿಸಲು ಯಾರಿಗೆ ಸಾಧ್ಯ?, ಪ್ರಧಾನಿಯವರು ಈ ವಿಷಯದಲ್ಲಿ ಗಾಢಮೌನ ತಳೆಯುತ್ತಾರೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ" ಎಂದರು.
ತನ್ನ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡದಂತೆ ವಿದ್ಯುನ್ಮಾನ ಮಾಧ್ಯಮಗಳಿಗೆ ಸೂಚಿಸಲಾಗಿದೆ ಎನ್ನುವುದು ತನಗೆ ತಿಳಿದು ಬಂದಿದೆ ಎಂದು ಅವರು ಆರೋಪಿಸಿದರು.
ನಮ್ಮ ಪ್ರಧಾನ ಸೇವಕರು ಸದಾ ಕ್ರೋನಿ ಕ್ಯಾಪಿಟಲಿಸಂ ಬಗ್ಗೆ ಮಾತನಾಡುತ್ತಿರುತ್ತಾರೆ. ಯಾರದಾದರೂ ವಿರುದ್ಧ 10 ಲ.ರೂ. ಭ್ರಷ್ಟಾಚಾರದ ಆರೋಪವಿದ್ದರೂ ಅವರು ಸಿಬಿಐ ಅನ್ನು ಛೂ ಬಿಡುತ್ತಾರೆ. ಇಡಿ ಅವರ ಹಿಂದೆ ಬೀಳುವಂತೆ ಮಾಡುತ್ತಾರೆ. ಹೀಗಾಗಿ ಈಗ ಸಿಬಿಐ ಮತ್ತು ಇಡಿ ಎಲ್ಲಿವೆ ಮತ್ತು ಪ್ರಧಾನಿ ಎಲ್ಲಿದ್ದಾರೆ ಎಂದು ನಾವು ಕೇಳುತ್ತಿದ್ದೇವೆ ಎಂದು ಕಪಿಲ್ ಸಿಬಲ್ ಹೇಳಿದರು.







