ಮೀಸಲಾತಿ ಮಿತಿ ಹೆಚ್ಚಿಸುವ ಬಗ್ಗೆ ಮಾತನಾಡಿ ಬಿಎಸ್‌ವೈ ತಮ್ಮ ಬದ್ಧತೆ ತೋರಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.8: ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.70ರಷ್ಟು ಹೆಚ್ಚಳ ಮಾಡಲು ರಾಜ್ಯ ಸರಕಾರ ಬದ್ಧವಾಗಿದ್ದು, ಇದೇ ಮೀಸಲಾತಿ ಹೆಚ್ಚಳದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮಾತನಾಡಿ ತಮ್ಮ ಬದ್ಧತೆಯನ್ನು ತೋರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ರವಿವಾರ ತುಮಕೂರು ರಸ್ತೆಯ ಡಾ.ಪ್ರಭಾಕರ್ ಕೋರೆ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಸರಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುತ್ತೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಯಡಿಯೂರಪ್ಪ ಅವರು ಆರೋಪಿಸಿದ್ದಾರೆ. ಆದರೆ, ನಮ್ಮ ಸರಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಈಗಲೂ ಬದ್ಧವಾಗಿದೆ. ಆದರೆ, ಇದೇ ಮಾತನ್ನು ಬಿಎಸ್‌ವೈ ಅವರು ಮಾತನಾಡಿ ಬದ್ಧತೆಯನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಭೋವಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರ ಎಲ್ಲ ರೀತಿಯ ಸೌಲಭ್ಯ, ಸಹಕಾರ ನೀಡಲಿದೆ. ಕಳೆದ ಬಾರಿ ಭರವಸೆ ನೀಡಿದಂತೆ ಭೋವಿ ಅಭಿವೃದ್ಧಿ ನಿಗಮವನ್ನು ಆರಂಭಿಸಲಾಗಿದೆ. ಅಲ್ಲದೆ, ರಾಜಕೀಯ ಮೀಸಲಾತಿ, ಕೆಪಿಎಸ್ಸಿ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಎಸ್ಸಿ, ಎಸ್ಟಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಲಿಲ್ಲ. ಆದರೆ, ಆ ಕೆಲಸವನ್ನು 2013ರಲ್ಲಿ ಜಾರಿಗೆ ತರುವ ಪ್ರಯತ್ನ ಮಾಡುವ ಮೂಲಕ 1 ಲಕ್ಷ 86 ಸಾವಿರ ಕೋಟಿ ರೂ.ಹಣವನ್ನು ಮೀಸಲಿಟ್ಟಿದ್ದೇನೆ. ದೇವರಾಜು ಅರಸು ಅವರು ಉಳುವವನೆ ಒಡೆಯ ಎಂದು ಭೂವಿಯನ್ನು ಹಂಚಿಕೆ ಮಾಡಿದರೆ, ನಮ್ಮ ಸರಕಾರ ವಾಸಿಸುವವನೆ ಮನೆಯ ಒಡೆಯ ಎಂದು ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದೆ ಎಂದರು.
ಸಂವಿಧಾನದಲ್ಲಿ ಮೀಸಲಾತಿಯನ್ನು ನೀಡಿದ್ದರೂ ಭೋವಿ ಜನಾಂಗದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸವನ್ನು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪೋಷಕರು ಮಕ್ಕಳನ್ನು ಉತ್ತಮವಾಗಿ ಓದಿಸಿ ಐಎಎಸ್, ಕೆಎಎಸ್ ಅಧಿಕಾರಿಗಳನ್ನಾಗಿ ಮಾಡಿ. ಅಲ್ಲದೆ, ಪ್ರತಿಭೆ ಎನ್ನುವುದು ಯಾರ ಸ್ವತ್ತೂ ಅಲ್ಲ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ತುಳಿತಕ್ಕೊಳಗಾಗಿರುವ ಭೋವಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರ ಅಭಿವೃದ್ಧಿ ನಿಗಮವನ್ನು ಆರಂಭಿಸಿದ್ದು, ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗಿದೆ. ನಿಗಮದ ಮೂಲಕ ಸಾಲ ಸೌಲಭ್ಯ ಸೇರಿದಂತೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಭೋವಿ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿರುವುದು ಮೈಸೂರು ಭಾಗದ ಜನಪ್ರತಿನಿಧಿಗಳು ಎನ್ನುವ ಹೆಮ್ಮೆಯ ಸಂಗತಿ. ಇಮ್ಮಡಿ ಕೃಷ್ಣರಾಜ ಒಡೆಯರು ಮೀಸಲಾತಿ ನೀಡಿದ್ದರು. ಅದಾದ ಬಳಿಕ ದೇವರಾಜ ಅರಸು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಸೌಲಭ್ಯಗಳನ್ನು ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಲ್ಲು ಒಡೆಯಲು ಅಡ್ಡಿಪಡಿಸುತ್ತಿದ್ದು, ಜಿಲ್ಲಾಧಿಕಾರಿಗಳಿಗೆ ಇಂದೇ ಆದೇಶ ಮಾಡಿ ಅವಕಾಶ ಮಾಡಿಕೊಡಬೇಕು. ಮುಂಬರುವ ಲೋಕಸಭೆ, ವಿಧಾನಸಭೆಗಳಲ್ಲಿ ಭೋವಿ ಅಭಿವೃದ್ಧಿ ನಿಗಮಕ್ಕೆ ಅನುದಾನವನ್ನು 500 ಕೋಟಿ ರೂ.ಗೆ ಹೆಚ್ಚಿಸಿ ಇಡೀ ಸಮುದಾಯ ನಿಮ್ಮ ಜೊತೆ ಇರಲಿದೆ. ಕಲ್ಲು ಒಡೆಯುವ ರೀತಿ ನಿಮಗೆ ಅಡ್ಡ ಬರುವವರನ್ನು ಪುಡಿ ಪುಡಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಮ್ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಿದ್ದರಾಮೇಶ್ವರ ಭವನ ನಿರ್ಮಾಣ ಮಾಡುವುದರ ಜೊತೆಗೆ ಯಾವುದಾದರೂ ವಿವಿಗೆ ಕುಲಪತಿಗಳನ್ನಾಗಿ ನೇಮಕ ಮಾಡಬೇಕು. ಅಲ್ಲದೆ, ಭೋವಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ವಸತಿ ಶಾಲೆಗಳನ್ನು ತೆರೆಯುವುದು ಸೇರಿ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದರು.
ಭೋವಿ ಅಭಿವೃದ್ಧಿ ನಿಗಮಕ್ಕೆ ಸರಕಾರ 50 ಕೊಟಿ ರೂ.ನೀಡಿದ್ದು, ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವಂತೆ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಭೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕರಾದ ಮಾನಪ್ಪ ವಜ್ಜಲ್, ಮುನಿರತ್ನ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಅಪರ ಮುಖ್ಯ ಕಾರ್ಯದರ್ಶಿ ಎಂ.ಲಕ್ಷ್ಮಿ ನಾರಾಯಣ್, ಹೈಕೋರ್ಟ್ ಹಿರಿಯ ವಕೀಲ ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಸ್ತೆ ನಿರ್ಮಾಣ, ಸ್ಕೈವಾಕ್ ನಿರ್ಮಾಣ, ಮನೆಗಳ ನಿರ್ಮಾಣ ಸೇರಿ ಇತರೆ ನಿರ್ಮಾಣಗಳಲ್ಲೂ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರಕಾರ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಶೇ.24.1ರಷ್ಟು ಮೀಸಲಾತಿಯನ್ನು ಒದಗಿಸಿದೆ. ಈ ಕೆಲಸವನ್ನು ಈ ಮೊದಲು ಆಡಳಿತ ಮಾಡಿದ ಯಾವ ಸರಕಾರವೂ ಮಾಡಲಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ







