ವಿಚಾರಣಾಧೀನ ಕೈದಿ ಆತ್ಮಹತ್ಯೆ

ಮಂಡ್ಯ, ಅ.8: ವಿಚಾರಣಾಧೀನ ಕೈದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದ ದಿವಂಗತ ಬೋರಯ್ಯ ಅವರ ಪುತ್ರ ವಿಶ್ವನಾಥ್ (39) ಆತ್ಮಹತ್ಯೆ ಕೈದಿ ಎಂದು ಗುರುತಿಸಲಾಗಿದೆ.
ತನ್ನ ಬಿಡುಗಡೆಗೆ ಪೋಷಕರು ಪ್ರಯತ್ನಿಸಲಿಲ್ಲವೆಂದು ಖಿನ್ನತೆಗೊಳಗಾಗಿದ್ದ ವಿಶ್ವನಾಥ್, ಜೈಲಿನ ಶೌಚಾಲಯದ ಕಿಟಕಿ ಸರಳಿಗೆ ಲುಂಗಿ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಶ್ವನಾಥ್, ತನ್ನ ಟಾಟಾ ಏಸ್ ವಾಹನದಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಗಾರ್ಮೆಂಟ್ಸ್ ಮಹಿಳೆಯರನ್ನು ಕೂರಿಸಿಕೊಂಡು ಕಾಫಿ, ಟಿ, ಕೂಲ್ ಡ್ರಿಂಕ್ಸ್‍ನಲ್ಲಿ ಮತ್ತು ಭರಿಸುವ ಮಾತ್ರೆ ಬೆರೆಸಿ ಕೊಟ್ಟು ಪ್ರಜ್ಞಾಹೀನರಾದ ಮಹಿಳೆಯರ ಚಿನ್ನಾಭರಣ, ನಗದು ದೋಚುತ್ತಿದ್ದ. ಮಂಡ್ಯ ಗ್ರಾಮಾಂತರ ಪೊಲೀಸರು ಈತನನ್ನು ಬಂಧಿಸಿ 420 ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಕಳೆದ ಸೆ.1 ರಿಂದ ಸದರಿ ವ್ಯಕ್ತಿಯನ್ನು ನ್ಯಾಯಾಂಗ ಬಂಧನಲ್ಲಿಡಲು ಆದೇಶಿಸಿತ್ತು.
ಜೈಲಿನಲ್ಲಿದ್ದ ವಿಶ್ವನಾಥ್‍ನನ್ನು ಪೋಷಕರು, ಸಂಬಂಧಿಕರು ಭೇಟಿಯೂ ಆಗಿರಲಿಲ್ಲ. ಜತೆಗೆ ಜಾಮೀನು ಕೊಡಿಸಲೂ ಮುಂದಾಗಿರಲಿಲ್ಲ. ಇದರಿಂದ ವಿಶ್ವನಾಥ್ ಖಿನ್ನತೆಗೊಳಗಾಗಿದ್ದ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಪೋಷಕರಿಗೆ ಒಪ್ಪಿಸಲಾಯಿತು.
ಈ ಬಗ್ಗೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





