ಲಂಡನ್: ಪಾದಚಾರಿಗಳ ಮೇಲೆ ಹರಿದ ಕಾರು
11 ಮಂದಿಗೆ ಗಾಯ; ಓರ್ವನ ಬಂಧನ

ಲಂಡನ್, ಅ. 8: ಲಂಡನ್‌ನ ಮ್ಯೂಸಿಯಂ ಜಿಲ್ಲೆ ಸೌತ್ ಕೆನ್ಸಿಂಗ್ಟನ್‌ನಲ್ಲಿ ಶನಿವಾರ ಕಾರೊಂದು ಪಾದಚಾರಿಗಳ ಮೇಲೆ ಹರಿದ ಪರಿಣಾಮ 11 ಮಂದಿ ಗಾಯಗೊಂಡಿದ್ದಾರೆ ಎಂದು ಆ್ಯಂಬುಲೆನ್ಸ್ ಸೇವೆ ತಿಳಿಸಿದೆ.
‘‘ನಾವು 11 ಜನರಿಗೆ ಚಿಕಿತ್ಸೆ ನೀಡಿದ್ದೇವೆ. ಅವರ ಪೈಕಿ ಹೆಚ್ಚಿನವರಿಗೆ ಕಾಲು ಮತ್ತು ತಲೆಗೆ ಗಾಯವಾಗಿದೆ. ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ’’ ಎಂದು ಆ್ಯಂಬುಲೆನ್ಸ್ ಸೇವೆಗಳ ಉಪ ನಿರ್ದೇಶಕ ಪೀಟರ್ ಮೆಕೇನ ಹೇಳಿಕೆಯೊಂದರಲ್ಲಿ ತಿಳಿಸಿದರು.
ಶನಿವಾರ ಜನದಟ್ಟಣೆಯ ಪ್ರವಾಸಿ ಸ್ಥಳವೊಂದರಲ್ಲಿ ಕಾರೊಂದು ಜನರ ಮೇಲೆ ಹಾದು ಹೋದ ಬಳಿಕ, ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಸಮೀಪ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದರು.
ಈ ಸ್ಥಳದಲ್ಲಿದ್ದ ಜನರು ಗಾಬರಿಯಿಂದ ಚೀರುತ್ತಾ ಓಡಿದರು ಎಂದು ಎಎಫ್‌ಪಿ ವರದಿಗಾರರೊಬ್ಬರು ಹೇಳಿದ್ದಾರೆ. ತಮಗೆ ದೊಡ್ಡ ಸದ್ದು ಕೇಳಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಮಾರ್ಚ್ ತಿಂಗಳಿನಿಂದ ಐದು ಭಯೋತ್ಪಾದಕ ದಾಳಿಗಳು ನಡೆದ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪೈಕಿ ನಾಲ್ಕು ದಾಳಿಗಳು ಲಂಡನ್‌ನಲ್ಲಿ ನಡೆದರೆ, ಒಂದು ಮ್ಯಾಂಚೆಸ್ಟರ್‌ನಲ್ಲಿ ನಡೆದಿದೆ. ಈ ದಾಳಿಗಳಲ್ಲಿ 35 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಲಂಡನ್‌ನಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳಲ್ಲಿ, ವಾಹನಗಳನ್ನು ಪಾದಚಾರಿಗಳ ಮೇಲೆ ಹರಿಸಲಾಗಿತ್ತು.







