ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ

ಮೈಸೂರು,ಅ.8: 17 ವರ್ಷದ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಇಬ್ಬರು ಕಾಮುಕರಿಗೆ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೆ.ಆರ್.ನಗರ ತಾಲೂಕಿನ ಬಸವರಾಜಪುರದ ನಿವಾಸಿಗಳಾದ ವಸಂತ (27) ಹಾಗೂ ಚೇತನ್ (28) ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದು, ಶಿಕ್ಷೆಯೊಂದಿಗೆ ತಲಾ 24ಸಾವಿರ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
2012ರ ಸೆ.1ರಂದು ಸಂಜೆ 4ರ ಸಮಯದಲ್ಲಿ ಕೆ.ಆರ್.ನಗರ ಪಟ್ಟಣದ ನಿವಾಸಿಯಾದ ಅಪ್ರಾಪ್ತೆ ಬಾಲಕಿ ತನ್ನ ಗೆಳೆಯನೊಂದಿಗೆ ಬಸವರಾಜಪುರದಲ್ಲಿನ ಜಮೀನಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಜಮೀನಿನ ಮಾಲಕ ಚೇತನ್, ಬಾಲಕಿಯ ಗೆಳೆಯನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಅದೇ ಸಮಯಕ್ಕೆ ಅಲ್ಲಿಗೆ ಆಗಮಿಸಿದ ಮಾಲಕ ಚೇತನ್ ಸ್ನೇಹಿತ ವಸಂತ್ ಬಾಲಕಿಯ ಗೆಳೆಯನ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡಿದ್ದಾನೆ. ಇದರಿಂದ ಬೆಚ್ಚಿದ ಬಾಲಕಿ ಗೆಳೆಯ ತನ್ನ ಸ್ನೇಹಿತರನ್ನು ಕರೆತರಲು ಓಡಿ ಹೋಗಿದ್ದಾನೆ.
ಈ ವೇಳೆ ಹೊಂಚು ಹಾಕಿದ್ದ ಕಾಮುಕರು ಅಪ್ರಾಪ್ತೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ವೀಡಿಯೊ ಮಾಡಿಕೊಂಡಿದ್ದಾರೆ. ಈ ಸಂದರ್ಭ ಓಡಿ ಹೋಗಿದ್ದ ಸ್ನೇಹಿತ ಮತ್ತೊಬ್ಬ ಸ್ನೇಹಿತನೊಂದಿಗೆ ಬಂದಿದ್ದಾನೆ. ಇದೇ ವೇಳೆ ಬಾಲಕಿ ನಡೆದ ಘಟನೆ ಹೇಳಿದ್ದಾಳೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡೂವರೆ ವರ್ಷ ಕಾರಾಗೃಹದಲ್ಲಿಟ್ಟು ಹೈಕೋರ್ಟ್ ಜಾಮೀನಿನ ಮೇರೆಗೆ ಇಬ್ಬರು ಆರೋಪಿಗಳು ಜೈಲಿಯಿಂದ ಹೊರಗೆ ಬಂದಿದ್ದರು.
ಇದರಿಂದ ಮನನೊಂದ ಅಪ್ರಾಪ್ತೆ ಮತ್ತೆ ನ್ಯಾಯಾಲಯದ ಮೆಟ್ಟಿಲು ಏರಿದಾಗ ವಿಚಾರಣೆ ನಡೆಸಿದ ನ್ಯಾಯಾಲಯ, ಸಾಕ್ಷ್ಯಾಧಾರದ ಮೇರೆಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲು ಹಾಗೂ ತಲಾ 24 ಸಾವಿರ ದಂಡ ವಿಧಿಸಿದೆ.
ಮೈಸೂರಿನ ನ್ಯಾಯಾಲಯದ ಇತಿಹಾಸದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಇಷ್ಟು ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಿದ ಎರಡನೇ ಪ್ರಕರಣ ಇದಾಗಿದೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮಹಾಂತಪ್ಪ ವಾದ ಮಂಡಿಸಿದ್ದರು.







