ರಾಷ್ಟ್ರೀಯ ಐಕ್ಯತೆಗೆ ರಾಜ್ಯ ಮಾದರಿ: ಪ್ರೊ. ಚಂದ್ರಶೇಖರ್ ಪಾಟೀಲ್
ಬೆಂಗಳೂರು, ಅ.8: ಹೊರನಾಡ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕರ್ನಾಟಕ ರಾಷ್ಟ್ರೀಯ ಐಕ್ಯತೆಗೆ ಮಾದರಿಯಾಗಿ ಹೊರಹೊಮ್ಮಿದೆ ಎಂದು 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.
ರವಿವಾರ ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಳ್ಳುವ ವಾರ್ಷಿಕ ಕನ್ನಡ ಮಾಧ್ಯಮ ಪ್ರಶಸ್ತಿ ಸಮಾರಂಭದ ಅಭಿಯಾನದ ಅಂಗವಾಗಿ ತಮಿಳುನಾಡಿನ ಡೆಂಕಣಿಕೋಟೆಯ ಮಾದಗೊಂಡನಗಳ್ಳಿಯಲ್ಲಿ ನಡೆದ ಮೊದಲ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೊರನಾಡ ಕನ್ನಡಿಗರಿಗೆ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಕರ್ನಾಟಕ ಮಾದರಿಯಾಗಿದೆ. ಈ ಮಾದರಿಯನ್ನು ತಮಿಳುನಾಡು ಸರಕಾರವೂ ಅನುಸರಿಸಬೇಕು ಹಾಗೂ ರಾಷ್ಟ್ರೀಯ ಭಾವೈಕ್ಯತೆಗೆ ಕಾರಣೀಭೂತರಾಗಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಶಾಸಕ ಪ್ರಕಾಶ್ ಮಾತನಾಡಿ, ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಹಿತಾಸಕ್ತಿಗೆ, ಕನ್ನಡಿಗ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ತಾವು ಬದ್ಧರಾಗಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮುರಳೀಧರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಿರೀಶ್ ಪಟೇಲ್ ಹಾಗೂ ಪ್ರಭಾಕರ್ ಪಟೇಲ್, ತಮಿಳುನಾಡಿನ ಕನ್ನಡ ಪರ ಸಂಘಟನೆಯ ಪ್ರತಿನಿಧಿ ವೇಣುಗೋಪಾಲ್ ಸೇರಿದಂತೆ ಇತರರು ಇದ್ದರು.







