ರೈಲ್ವೇಯಲ್ಲಿ ವಿಐಪಿ ಸಂಸ್ಕೃತಿಗೆ ಎಳ್ಳುನೀರು...

ಹೊಸದಿಲ್ಲಿ, ಅ. 8: ಭಾರತೀಯ ರೈಲ್ವೇಯಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ಒಂದು ಹೆಜ್ಜೆಯಾಗಿ ಮನೆ ಹಾಗೂ ಕೆಲಸದ ಸ್ಥಳಗಳಲ್ಲಿ ವಿಶೇಷ ಗೌರವವನ್ನು ಬಿಟ್ಟು ಬಿಡುವಂತೆ ರೈಲ್ವೇ ಸಚಿವಾಲಯ ಹಿರಿಯ ಅಧಿಕಾರಿಗಳಲ್ಲಿ ವಿನಂತಿಸಿದೆ.
ರೈಲ್ವೇ ಮಂಡಳಿ ಅಧ್ಯಕ್ಷ ಹಾಗೂ ಮಂಡಳಿಯ ಇತರ ಸದಸ್ಯರು ವಲಯಕ್ಕೆ ಭೇಟಿಯಾಗಲು ಆಗಮಿಸುವಾಗ ಹಾಗೂ ತೆರಳುವಾಗ ಅವರೊಂದಿಗೆ ಜನರಲ್ ಮ್ಯಾನೇಜರ್ ಉಪಸ್ಥಿತಿರುವ 36 ವರ್ಷಗಳ ಹಳೆಯ ಕಡ್ಡಾಯ ಶಿಷ್ಟಾಚಾರಕ್ಕೆ ಅಂತ್ಯ ಹಾಡಲು ಸಚಿವಾಲಯ ನಿರ್ಧರಿಸಿದೆ.
ಸಚಿವಾಲಯದಲ್ಲಿ ಚಾಲ್ತಿಯಲ್ಲಿರುವ ಸೌಲಭ್ಯವನ್ನು ಸಾಮೂಹಿಕವಾಗಿ ರದ್ದುಗೊಳಿಸುವ ಒಂದು ಭಾಗವಾಗಿ ಇಂತಹ ಶಿಷ್ಟಾಚಾರಗಳನ್ನು ಕಡ್ಡಾಯಗೊಳಿಸಿರುವ 1981ರ ಸುತ್ತೋಲೆಯ ಸೂಚನೆಗಳನ್ನು ರದ್ದುಗೊಳಿಸಲು ರೈಲ್ವೇ ಮಂಡಳಿ ನಿರ್ಧರಿಸಿದೆ.
ರೈಲ್ವೇ ಮಂಡಳಿ ಅಧ್ಯಕ್ಷ ಹಾಗೂ ಮಂಡಳಿಯ ಇತರ ಸದಸ್ಯರು ವಿಮಾನ ನಿಲ್ದಾಣ ಹಾಗೂ ರೈಲ್ವೇ ನಿಲ್ದಾಣಗಳಿಗೆ ಭೇಟಿ ನೀಡುವ ಸಂದರ್ಭ ಅನುಸರಿಸಬೇಕಾದ ಶಿಷ್ಟಾಚಾರಕ್ಕೆ ಸಂಬಂಧಿಸಿ ಸಲಹೆ ಹಾಗೂ ಮಾರ್ಗಸೂಚಿಗಳನ್ನು ಸಚಿವಾಲಯ ಸೆಪ್ಟಂಬರ್ 28ರ ಆದೇಶದಲ್ಲಿ ತಿಳಿಸಿದೆ.
ಯಾವುದೇ ಸಂದರ್ಭ ಅಧಿಕಾರಿಗಳು ಉಡುಗೊರೆ ಹಾಗೂ ಹೂಗುಚ್ಛಗಳನ್ನು ಸ್ವೀಕರಿಸಬಾರದು. ಇದನ್ನು ಅಧಿಕಾರಿಗಳು ಕಚೇರಿ ಹಾಗೂ ಮನೆಯಲ್ಲಿ ಅನುಸರಿಸಬೇಕು. ತಮ್ಮ ಮನೆಗಳಲ್ಲಿ ಮನೆಗೆಲಸದಲ್ಲಿ ತೊಡಗಿಸಿಕೊಂಡ ರೈಲ್ವೇ ಸಿಬ್ಬಂದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ತಿಳಿಸಿದ್ದಾರೆ.
ಸುಮಾರು 30 ಸಾವಿರ ಟ್ರಾಕ್‌ಮ್ಯಾನ್‌ಗಳು ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತುಂಬಾ ವಿಶೇಷ ಪರಿಸ್ಥಿತಿ ಹೊರತುಪಡಿಸಿ ಉಳಿದಂತೆ ಮನೆಗೆಲಸದಲ್ಲಿ ತೊಡಗಿಕೊಂಡ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಎಲ್ಲ ಸಿಬ್ಬಂದಿ ಕೂಡಲೇ ಕೆಲಸಕ್ಕೆ ಹಾಜರಾಗುತ್ತಾರೆ ಎಂಬುದು ನಮ್ಮ ನಿರೀಕ್ಷೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೇಯ ಹಿರಿಯ ಅಧಿಕಾರಿಗಳು ಐಷಾರಾಮಿ ಹಾಗೂ ಎಕ್ಸಿಕ್ಯೂಟಿವ್ ಬೋಗಿಗಳಲ್ಲಿ ಪ್ರಯಾಣಿಸುವ ಸೌಲಭ್ಯ ಪಡೆಯದೆ ಸ್ಲೀಪರ್ ಹಾಗೂ ಎಸಿ ತ್ರಿ ಟಿಯರ್ ಕ್ಲಾಸ್‌ಗಳಲ್ಲಿ ಪ್ರಯಾಣಿಸಬೇಕು. ಇತರ ಪ್ರಯಾಣಿಕರೊಂದಿಗೆ ಬೆರೆಯಬೇಕು ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.







