ಮಕ್ಕಳನ್ನು ಶಾಲೆಗೆ ಕಳಿಸದಿದ್ದರೆ ಅನ್ನಾಹಾರ ನೀಡದೆ ಜೈಲಿಗೆ ಹಾಕುತ್ತೇನೆ
ಪೋಷಕರಿಗೆ ಧಮಕಿ ಹಾಕಿದ ಉ.ಪ್ರದೇಶದ ಸಚಿವ

ಲಕ್ನೊ, ಅ.8: ‘‘ನಾನು ನನ್ನ ಆಯ್ಕೆಯ ನಿಯಮವೊಂದನ್ನು ಜಾರಿಗೊಳಿಸಲಿದ್ದೇನೆ. ಬಡವರ ಮಕ್ಕಳು ಶಾಲೆಗೆ ಹೋಗದಿದ್ದರೆ ಅವರ ಪೋಷಕರನ್ನು ಐದು ದಿನ ಜೈಲಿನಲ್ಲಿ ಬಂಧಿಸಿಡಲಾಗುತ್ತದೆ. ಅವರಿಗೆ ಅನ್ನ, ಆಹಾರ ನೀಡುವುದಿಲ್ಲ’’ ಎಂದು ಉತ್ತರ ಪ್ರದೇಶದ ಸಚಿವ ಓಂಪ್ರಕಾಶ್ ರಾಜ್‌ಭರ್ ಎಚ್ಚರಿಕೆ ನೀಡಿರುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಂಗವಿಕಲರ ಸಬಲೀಕರಣ ಇಲಾಖೆಯ ಸಚಿವ ಓಂಪ್ರಕಾಶ್, “ಇದುವರೆಗೆ ನಿಮ್ಮ ನಾಯಕ, ಮಗ, ಅಣ್ಣ ನಿಮಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೂ ನಿಮಗೆ ಅರ್ಥವಾಗಿಲ್ಲ ಎಂದಾದರೆ ಇನ್ನೂ ಆರು ತಿಂಗಳು ನಿಮಗೆ ಕಲಿಸಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.
ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ನಿರಾಕರಿಸುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಓಂಪ್ರಕಾಶ್, ರಾಮಾಯಣದ ಒಂದು ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಲಂಕೆಯಲ್ಲಿ ರಾವಣ ಬಂಧಿಸಿಟ್ಟಿರುವ ತನ್ನ ಪತ್ನಿ ಸೀತೆಯನ್ನು ರಕ್ಷಿಸಲು ತಾನು ಲಂಕೆಗೆ ತೆರಳಬೇಕಿದೆ. ಆದ್ದರಿಂದ ದಾರಿ ಮಾಡಿಕೊಡು ಎಂದು ಶ್ರೀರಾಮ ಸಮುದ್ರರಾಜನಲ್ಲಿ ವಿನಂತಿಸಿದಾಗ ಸಮುದ್ರರಾಜ ಒಪ್ಪಲಿಲ್ಲ. ಆಗ ಆಗ ಶ್ರೀರಾಮ ಬಾಣದಿಂದಲೇ ಸೇತುವೆ ಕಟ್ಟಿ ಕಾರ್ಯಸಾಧಿಸಿದ.
“ಇದೇ ರೀತಿಯಲ್ಲಿ ಮರ್ಯಾದೆಯಲ್ಲಿ ಹೇಳಿದರೆ ಅರ್ಥವಾಗದ ಪೋಷಕರಿಗೆ ಬುದ್ಧಿ ಕಲಿಸಬೇಕಿದೆ. ಇಂತಹ ಪೋಷಕರನ್ನು ಪೊಲೀಸರು ಜೈಲಿಗೆ ಹಾಕುತ್ತಾರೆ. ಇಂತಹ ಪೋಷಕರಿಗೆ ಮರಣದಂಡನೆ ಶಿಕ್ಷೆ ವಿಧಿಸಲೂ ನಾನು ಸಿದ್ಧ” ಎಂದು ಸಚಿವರು ಹೇಳಿದ್ದಾರೆ.
ಈ ಮಧ್ಯೆ ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದರೂ ಈ ಹೇಳಿಕೆಗೆ ತಾನು ಬದ್ಧ ಎಂದು ಸಚಿವರು ತಿಳಿಸಿದ್ದಾರೆ. ಪೋಷಕರನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಸಿದ್ದರಲ್ಲಿ ತಪ್ಪೇನಿದೆ. ಸರಕಾರ ಎಲ್ಲಾ ಸೌಲಭ್ಯ ಒದಗಿಸುತ್ತಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಯಾಕೆ ಶಾಲೆಗೆ ಕಳಿಸುತ್ತಿಲ್ಲ ಎಂದು ಸಚಿವ ಓಂಪ್ರಕಾಶ್ ಪ್ರಶ್ನಿಸಿದ್ದಾರೆ.







