ಪುಟಿನ್ ಹುಟ್ಟಿದ ದಿನದಂದು ರಶ್ಯದಾದ್ಯಂತ ಪ್ರತಿಭಟನೆ

ಸೇಂಟ್ ಪೀಟರ್ಸ್‌ಬರ್ಗ್ (ರಶ್ಯ), ಅ. 8: ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಹುಟ್ಟುಹಬ್ಬ ಆಚರಿಸುತ್ತಿದ್ದಂತೆಯೇ, ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ದೇಶಾದ್ಯಂತ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನ್ಯಾಯೋಚಿತ ಚುನಾವಣೆ ನಡೆಸಬೇಕೆಂಬ ಜೈಲಿನಲ್ಲಿರುವ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ಬೇಡಿಕೆಯನ್ನು ಬೆಂಬಲಿಸಿ, ರಶ್ಯದ ಎರಡನೆ ದೊಡ್ಡ ನಗರ ಹಾಗೂ ಪುಟಿನ್‌ರ ಊರು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸುಮಾರು 3,000 ಜನರು ಪ್ರತಿಭಟನೆ ನಡೆಸಿದರು. ಅದೇ ವೇಳೆ, ಮಾಸ್ಕೋದ ಕೇಂದ್ರದಲ್ಲಿ 1,000ಕ್ಕೂ ಅಧಿಕ ಜನರು ಜಮಾಯಿಸಿ ಪ್ರತಿಭಟಿಸಿದರು ಎಂದು ಎಎಫ್‌ಪಿ ವರದಿ ಮಾಡಿದೆ.
ಪುಟಿನ್ ಹುಟ್ಟಿದ ದಿನದಂದು ಹಿಂಸೆಯನ್ನು ತಪ್ಪಿಸುವುದಕ್ಕಾಗಿ ಮಾಸ್ಕೊದಲ್ಲಿ ಮೆರವಣಿಗೆ ನಡೆಸಲು ಪ್ರತಿಭಟನಕಾರರಿಗೆ ಪೊಲೀಸರು ಅವಕಾಶ ನೀಡಿದರು. ಆದರೆ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿನ ಪ್ರತಿಭಟನೆ ಹಿಂಸೆಯಲ್ಲಿ ಕೊನೆಗೊಂಡಿತು.
ಅಲ್ಲಿ ಕನಿಷ್ಠ 62 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜಕೀಯ ಪ್ರೇರಿತ ಬಂಧನಗಳ ಮೇಲೆ ನಿಗಾ ಇಟ್ಟಿರುವ ‘ಓವಿಡಿ-ಇನ್ಫೊ’ ತಿಳಿಸಿದೆ.





