ಸಮನ್ವಯ ಕೊರತೆಯಿಂದ ಸ್ಮಾರ್ಟ್ ಸಿಟಿ ಯೋಜನೆ ವಿಳಂಬ: ಶಾಲಿನಿ ರಜಿನೀಶ್

ತುಮಕೂರು, ಅ.7: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿಗಳ ಸಮನ್ವಯತೆಯೇ ಮುಖ್ಯ ಕಾರಣವೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಲಿಕೆಯ ಸಭಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿದ ಅವರು, ಪಾಲಿಕೆ, ಬೆಸ್ಕಾಂ, ಒಳಚರಂಡಿ ಮಂಡಳಿ, ಕೆಎಸ್ಸಾರ್ಟಿಸಿ, ಟೂಡಾ ಹಾಗೂ ಸ್ಮಾರ್ಟ್ ಸಿಟಿ ಯೋಜನಾ ತಂಡದ ಅಧಿಕಾರಿಗಳು ಪರಸ್ಪರ ಸಹಕಾರ ಹಾಗೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ತುಮಕೂರು ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತದೆ ಎಂದರು.
ಸಭೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುವ ಹಲವಾರು ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಅ.23ರಂದು ಮಂಡಳಿ ಸಭೆ ನಡೆಯಲಿದ್ದು, ಇನ್ನೊಂದು ವಾರದೊಳಗೆ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಎಲ್ಲಾ ಕ್ರಿಯಾ ಯೋಜನೆಗಳ ಮಾಹಿತಿ ನನ್ನ ಕೈಸೇರಬೇಕು ಎಂದು ಅದಿಕಾರಿಗಳಿಗೆ ಸೂಚಿಸಿದರು.
ಉಳಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ವ್ಯವಸ್ಥೆ, ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸ್ಮಾರ್ಟ್ ಕೊಠಡಿ, ಉತ್ತಮ ಸಾರಿಗೆ ವ್ಯವಸ್ಥೆ, ಪಬ್ಲಿಕ್ ಬೈಸಿಕಲ್ ಶೇರಿಂಗ್ ಮತ್ತಿತರ ಯೋಜನೆಗಳಿಗೆ ಕೂಡಲೇ ಟೆಂಡರ್ ಕರೆದು ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಅವರು ತಾಕೀತು ಮಾಡಿದರು.
4 ಸ್ಮಾರ್ಟ್ ರಸ್ತೆ ನಿರ್ಮಾಣ: ನಗರದ ಬಿ.ಎಚ್.ರಸ್ತೆ, ಅಶೋಕ ರಸ್ತೆ, ಜೆಸಿ ರಸ್ತೆ ಸೇರಿ ಒಟ್ಟು 4 ರಸ್ತೆಗಳನ್ನು ಸ್ಮಾರ್ಟ್ ರಸ್ತೆಯನ್ನಾಗಿ ಮಾಡುವ ನಿರ್ಮಾಣ ಕಾರ್ಯದ ಪ್ರಗತಿಯಲ್ಲಿ ತಡವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಿಪಡಿಸಿದ ಅವರು, ಸರ್ವೇ ಕಾರ್ಯ ಮುಗಿದರೂ ಇನ್ನೂ ಒತ್ತುವರಿ ತೆರವಿನ ಕೆಲಸ ಮುಗಿದಿಲ್ಲ. ಕೂಡಲೇ ಸ್ಮಾರ್ಟ್ ರಸ್ತೆಗೆ ಸಂಬಂಧಿಸಿದಂತೆ ಒತ್ತುವರಿ ತೆರವನ್ನು ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಹರ್ಬಲ್ ಗಾರ್ಡನ್ ಗೆ ಆದ್ಯತೆ: ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಬೇಕೆಂದಿರುವ ನಗರದ 15 ಸ್ಮಾರ್ಟ್ ಪಾರ್ಕ್‍ಗಳಲ್ಲಿ ಹರ್ಬಲ್ ಗಾರ್ಡನ್‍ಗೆ ಆದ್ಯತೆ ನೀಡಬೇಕು. ನಾವಿನ್ಯತೆಯಿಂದ ಕೂಡಿದ ಕಲಾತ್ಮಕವಾಗಿರುವ ಪಾರ್ಕ್‍ಗಳನ್ನು ಉತ್ತಮ ಬೆಳಕಿನ ವ್ಯವಸ್ಥೆಯೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಪಾರ್ಕ್ ಇದಾಗಬೇಕೆಂದರಲ್ಲದೆ ಪಾರ್ಕ್ ನಿರ್ಮಾಣಕ್ಕೆ ಎಲ್ಲಾ ಪಾಲಿಕೆ ಸದಸ್ಯರ ಸಹಮತದೊಂದಿಗೆ ಸಲಹೆ ಅಭಿಪ್ರಾಯಗಳನ್ನು ಪಡೆದು ಅನುಮೋದನೆ ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗ್ಲಾಸ್ ಹೌಸ್ ಬಳಕೆಗೆ ಸೂಚನೆ: ಕೋಟ್ಯಾಂತರ ರೂ.ಖರ್ಚು ಮಾಡಿ ನಗರದಲ್ಲಿ ನಿರ್ಮಿಸಿರುವ ಗ್ಲಾಸ್‍ಹೌಸ್ ಅನ್ನು ಮದುವೆ, ಸಮಾರಂಭ, ವಸ್ತುಪ್ರದರ್ಶನಗಳಂತಹ ಕಾರ್ಯಕ್ರಮಗಳಿಗೆ ಬಾಡಿಗೆ ಆಧಾರದ ಮೇಲೆ ನೀಡಿ ಸರಕಾರಕ್ಕೆ ಆದಾಯ ಬರುವಂತೆ ಕ್ರಮ ಕೈಗೊಳ್ಳಿ. ಇದಕ್ಕಾಗಿ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದರು.
ಅಮಾನಿಕೆರೆ ಉದ್ಯಾನದ ಅಭಿವೃದ್ಧಿ: ಅಮಾನಿಕೆರೆ ಉದ್ಯಾನವನದ ಅಭಿವೃದ್ಧಿಯಲ್ಲಿ ಅರಣ್ಯೀಕರಣ, ನೀರು ಸಂರಕ್ಷಣಾ ವ್ಯವಸ್ಥೆ, ಎಟಿಎಂ ಹಾಗೂ ತುಮಕೂರು ಒನ್ ಕೇಂದ್ರ, ಇ-ಲೈಬ್ರರಿ, ಶೌಚಾಲಯ, ಕೆಫೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರಬೇಕು. ಕುರಿಪಾಳ್ಯದಲ್ಲಿ ದಿಬ್ಬೂರು ಮಾದರಿಯಲ್ಲಿ ವಸತಿಗಳನ್ನು ನಿರ್ಮಾಣ, ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣದ ಪುನರ್ ಅಭಿವೃದ್ಧಿಗೆ ಯೋಜನೆ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜಿಯಾಗಲು ಎಪಿಎಂಸಿ ಮತ್ತು ಪಾಲಿಕೆಗೆ ಸೂಚನೆ: ಎಪಿಎಂಸಿ ಹಾಗೂ ಪಾಲಿಕೆ ನಡುವಿರುವ ಬಾಳನಕಟ್ಟೆ ಪ್ರದೇಶದ ಹೂವಿನ ಮಾರುಕಟ್ಟೆಯ ನಿವೇಶನ ವ್ಯಾಜ್ಯವನ್ನು ಅಧಿಕಾರಿಗಳು ಚರ್ಚಿಸಿ ಜಂಟಿಯಾಗಿ ರಾಜಿ ಮಾಡಿಕೊಳ್ಳಬೇಕು. ಕೋರ್ಟ್‍ನಲ್ಲಿರುವ ಪ್ರಕರಣವನ್ನು ಹಿಂಪಡೆದು ಜಿಲ್ಲಾಧಿಕಾರಿಗಳ ಹಂತದಲ್ಲಿ ತೀರ್ಮಾನ ಕೈಗೊಳ್ಳಬೇಕು.ಇಲ್ಲದಿದ್ದರೆ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗುತ್ತದೆ ಎಂದರು.
ಸಭೆಯಲ್ಲಿ ಸ್ಮಾರ್ಟ್ ಸಿಟಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ್, ಪಾಲಿಕೆ ಆಯುಕ್ತ ಮಂಜುನಾಥ ಸ್ವಾಮಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







