ನಮ್ಮನ್ನು ಟೀಕಿಸುವವರು ವಿರೋಧಿಗಳು ಎಂದು ಭಾವಿಸುವುದು ಅಪಾಯ: ಪ್ರಕಾಶ್ ಆರ್. ಕಮ್ಮಾರ್
.jpg)
ಸಾಗರ, ಅ.8: ಅನಿಸಿದ್ದನ್ನು ಹೇಳುವುದು ಮತ್ತು ಬರೆಯುವುದಕ್ಕೂ ಭಯದ ವಾತಾವರಣವಿದೆ. ಆದರೆ ನಿರ್ಭೀತಿಯಿಂದ ನಮಗೆ ಅನಿಸಿದ್ದನ್ನು ಅಭಿವ್ಯಕ್ತಗೊಳಿಸುವಂತೆ ಆಗಬೇಕು ಎಂದು ಸಾಹಿತಿ ಪ್ರಕಾಶ್ ಆರ್. ಕಮ್ಮಾರ್ ಅಭಿಪ್ರಯಾಪಟ್ಟಿದ್ದಾರೆ.
ಇಲ್ಲಿನ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಜನಪದ ಪರಿಷತ್ ಮತ್ತು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸ್ಥಳೀಯ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ದಸರಾ-ದೀಪಾವಳಿ ಕವಿಗೋಷ್ಠಿಯನ್ನು ಕವನ ವಾಚಿಸುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಟೀಕೆಯನ್ನು ಸ್ವೀಕರಿಸುವ ಮನೋಭಾವ ಅಗತ್ಯ. ಟೀಕೆಯನ್ನು ಸ್ವೀಕರಿಸಿದಾಗ ಮಾತ್ರ ತಿದ್ದಿ ಕೊಳ್ಳುವ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದು ನಿಲ್ಲಲು ಸಾಧ್ಯ. ನಮ್ಮನ್ನು ನಾವು ಆಗಾಗ ಒರೆಗೆ ಹಚ್ಚಿಕೊಳ್ಳುತ್ತಾ ಇರಬೇಕು. ಅಭಿವೃದ್ಧಿಯನ್ನು ಕಂಡು ತುಳಿಯುವವರು ಇರುತ್ತಾರೆ. ತುಳಿಯುವವರು ಇದ್ದಾಗ ಮಾತ್ರ ನಮ್ಮೊಳಗಿನ ಪ್ರತಿಭೆ ಅಭಿವ್ಯಕ್ತಗೊಳ್ಳಲು ಸಾಧ್ಯ ಎಂದರು.
ನಮ್ಮನ್ನು ಟೀಕಿಸುವವರು ವಿರೋಧಿಗಳು ಎಂದು ಭಾವಿಸುವುದು ಅಪಾಯ. ನಾವು ವಿರೋಧಿಗಳು ಎಂದು ಭಾವಿಸಿದಾಗ ಅದು ನಮ್ಮನ್ನು ತಪ್ಪು ದಾರಿಗೆ ಕರೆದೊಯ್ದು ಬಿಡುತ್ತದೆ. ಅದರ ಬದಲು ಟೀಕೆಯಲ್ಲಿ ಸತ್ಯಾಂಶವಿದೆಯೆ ಎಂದು ಪರಿಶೀಲಿಸಿ, ತಪ್ಪಿದ್ದರೆ ಸರಿಪಡಿಸಿಕೊಂಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.
ಈ ವೇಳೆ ವಿ.ಶಂಕರ್, ಜಿ.ನಾಗೇಶ್, ರವೀಂದ್ರ ಭಟ್ ಕುಳಿಬೀಡು, ಚಂದ್ರಶೇಖರ ಶಿರವಂತೆ, ಪರಮೇಶ್ವರ ಕರೂರು, ಯೋಗೀಶ್ ಜಿ., ಬಸ್ತಿ ಸದಾನಂದ ಪೈ, ವಿಷ್ಣುಮೂರ್ತಿ ಆನಂದಪುರಂ, ರವಿರಾಜ್ ಮಂಡಗಳಲೆ, ಎಚ್.ಎಂ.ತಿಮ್ಮಪ್ಪ, ಮಹಾಬಲಗಿರಿಯಪ್ಪ, ಡಾ. ಕೆಳದಿ ವೆಂಕಟೇಶ್ ಜೋಯಿಸ್, ಶಿವರಾಂ, ಪೃಥ್ವಿ ಎಸ್. ಸಾಗರ, ರೋಹಿತ್ ಜೋಗ, ವಸಂತ ಕುಗ್ವೆ, ಚಂದ್ರಶೇಖರ್ ಇನ್ನಿತರರು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜನಪದ ಪರಿಷತ್ ಸಾಗರ ಶಾಖೆ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸ್ಥಳೀಯ ಶಾಖೆ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ್, ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ಗಣಪತಪ್ಪ, ಲೇಖಕ ವಿ. ಗಣೇಶ್ ಹಾಜರಿದ್ದರು. ನಾಗರಾಜ ತೋಂಬ್ರಿ ಪ್ರಾರ್ಥಿಸಿದರು. ಜಿ.ಎಚ್.ಶಿವಯೋಗಿ ಸ್ವಾಗತಿಸಿದರು. ಕಸ್ತೂರಿ ನಾಗರಾಜ್ ವಂದಿಸಿದರು. ರಾಜೇಂದ್ರ ಆವಿನಹಳ್ಳಿ ನಿರೂಪಿಸಿದರು.







