ಮಿಸಿಸಿಪ್ಪಿ ತೀರಕ್ಕೆ ಅಪ್ಪಳಿಸಿದ ‘ನೇಟ್’ ಚಂಡಮಾರುತ: ಭಾರೀ ಬಿರುಗಾಳಿ, ಮಳೆ

ನ್ಯೂ ಆರ್ಲಿನ್ಸ್ (ಅಮೆರಿಕ), ಅ. 8: ಚಂಡಮಾರುತ ‘ನೇಟ್’ ಶನಿವಾರ ಮಿಸಿಸಿಪ್ಪಿ ನದಿಯ ಅಳಿವೆಯಲ್ಲಿರುವ ವಿರಳ ಜನಸಂಖ್ಯೆಯ ಸ್ಥಳದಲ್ಲಿ ತೀರಕ್ಕೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಮಧ್ಯ ಗಲ್ಫ್ ಕರಾವಳಿಗೆ ಭಾರೀ ವೇಗದ ಬಿರುಗಾಳಿ ಅಪ್ಪಳಿಸಿದೆ ಹಾಗೂ ಈ ವಲಯದಲ್ಲಿ ಭಾರೀ ಮಳೆಯಾಗಿದೆ.
ಇದರ ಬಳಿಕವೂ ವೇಗವಾಗಿ ಧಾವಿಸುತ್ತಿರುವ ಚಂಡಮಾರುತವು ಮಿಸಿಸಿಪ್ಪಿ ಕರಾವಳಿಯಲ್ಲಿ ಇನ್ನೊಮ್ಮೆ ಭೂಮಿಗೆ ಅಪ್ಪಳಿಸುವುದೆಂದು ನಿರೀಕ್ಷಿಸಲಾಗಿದೆ. ಇದರ ಪರಿಣಾಮವಾಗಿ ಆ ವಲಯದಲ್ಲಿನ ಮನೆಗಳು ಮತ್ತು ಅಂಗಡಿಗಳು ಜಲಾವೃತವಾಗುವ ಭೀತಿ ಎದುರಾಗಿದೆ.
ಇಲ್ಲಿಂದ ‘ನೇಟ್’ ನ್ಯೂ ಆರ್ಲಿನ್ಸ್‌ನ ಪೂರ್ವಕ್ಕೆ ಧಾವಿಸುತ್ತದೆಂದು ಭಾವಿಸಲಾಗಿದೆ. ಹಾಗಾಗಿ, ನ್ಯೂ ಆರ್ಲಿನ್ಸ್ ನಗರವು ಚಂಡಮಾರುತದ ಪ್ರಕೋಪದಿಂದ ಪಾರಾಗಿದೆ ಎನ್ನಲಾಗಿದೆ.
ಚಂಡಮಾರುತದ ವೇಗವನ್ನು ಗಮನಿಸಿದರೆ, ನಗರದಲ್ಲಿ ಸುದೀರ್ಘ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗಿದೆ. ಆದಾಗ್ಯೂ, ಸಂಜೆ 7 ಗಂಟೆ ಬಳಿಕ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ನಗರದ ಬೀದಿಗಳಲ್ಲಿ ಶನಿವಾರ ರಾತ್ರಿಗಳಂದು ಇರುವಷ್ಟು ಜನಸಂದಣಿ ಇರಲಿಲ್ಲ.
ಮಿಸಿಸಿಪ್ಪಿ ಕರಾವಳಿಯಲ್ಲಿರುವ ಗಲ್ಫ್‌ಪೋರ್ಟ್ ಮತ್ತು ಬಿಲೋಕ್ಸಿ ನಗರಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.







