ಕಟ್ಟಡಗಳಿಗೆ ನುಗ್ಗಿದ ಮಳೆ ನೀರು: ಸೂಕ್ತ ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು, ಅ.8: ನಲ್ಲೂರು ಗೇಟ್ ಬಳಿ ಕೆ.ಎಂ.ರಸ್ತೆಯ ಎರಡೂ ಬದಿಗಳಲ್ಲಿರುವ ಚರಂಡಿಗಳು ಮುಚ್ಚಿ ಹೋಗಿದ್ದು ಕೆಲವು ಕಡೆ ಕಾಂಕ್ರಿಟ್ ಹಾಕಿ ಮುಚ್ಚಿದ್ದರಿಂದ ಮಳೆ ನೀರು ಅಂಗಡಿ ಮಳಿಗೆಗಳು ಹಾಗೂ ಮನೆಗಳಿಗೆ ನುಗ್ಗುತ್ತಿದ್ದು ನಗರಸಭೆ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸೆಲ್ ಸರ್ವೀಸ್ ಸ್ಟೇಷನ್, ಕುವೆಂಪು ವಿದ್ಯಾನಿಕೇತನ, ಹಲವು ಖಾಸಗಿ ಮಳಿಗೆಗಳು, ಸಾಮಿಲ್ ಹಾಗೂ ಹಲವು ಮನೆಗಳು ಮೂಡಿಗೆರೆಗೆ ತೆರಳುವ ಕೆ.ಎಂ. ರಸ್ತೆಯ ನಲ್ಲೂರು ಗೇಟ್ ಬಳಿ ಇದ್ದು ಮಳೆ ಬಂದರೆ ನೀರು ಹರಿದು ಹೋಗದೆ ಪಕ್ಕದ ವಾಣಿಜ್ಯ ಮಳಿಗೆಗಳು, ಶಾಲಾ ಆವರಣ ಮತ್ತು ಮನೆಗಳಿಗೆ ನುಗ್ಗುತ್ತಿರುವುದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ. ಸಣ್ಣ ಮಳೆ ಬಂದರೂ ಈ ಭಾಗದ ಎಕ್ಸೆಲ್ ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಮಳಿಗೆಗಳ ಎದುರು ವಾರಗಟ್ಟಲೆ ನೀರು ನಿಲ್ಲುತ್ತಿದ್ದು, ವಾಣಿಜ್ಯ ವಹಿವಾಟುಗಳಿಗೂ ತೊಂದರೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ತುಂಬಿಸಲು ಬಂಕ್‌ಗೆ ವಾಹನಗಳು ತೆರಳಲೂ ಕಷ್ಟ ಸಾಧ್ಯವಾಗುತ್ತಿದ್ದು ಶಾಲಾ ವಿದ್ಯಾರ್ಥಿಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.
ಇಲ್ಲಿನ ಚರಂಡಿಗಳು ಮುಚ್ಚಿ ಹೋಗಿದ್ದು ನೀರು ಸರಾಗವಾಗಿ ಹರಿಯದಿರುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದ್ದು ಶಾಸಕ ಸಿ.ಟಿ.ರವಿ ಕೂಡ ದೂರು ಪಡೆದರೇ ವಿನಃ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.
ನಗರಸಭೆಯ ಆಯುಕ್ತರಿಗೆ ಸ್ಥಳೀಯರು ಖುದ್ದು ಮನವಿ ಸಲ್ಲಿಸಿದಾಗ ಸಂಬಂಧಿಸಿದ ಅಭಿಯಂತರ ಮಂಜುನಾಥ್ ಸ್ಥಳಕ್ಕೆ ಭೇಟಿ ಕೊಟ್ಟು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದಾರೆ. ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿರುವುದರಿಂದ ಕೂಡಲೇ ಇಲ್ಲಿ ಕಟ್ಟಿ ನಿಂತಿರುವ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ತುರ್ತು ಚರಂಡಿ ಕಾಮಗಾರಿ ಮಾಡಿಸದಿದ್ದರೆ ನಗರಸಭೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಸುತ್ತಮುತ್ತಲಿನ ನಿವಾಸಿಗಳು ತಿಳಿಸಿದ್ದಾರೆ.







