ಸೆಸ್ಕ್ ಕಾಮಗಾರಿಗೆ ಶಾಸಕ ತಮ್ಮಣ್ಣ ಚಾಲನೆ

ಮದ್ದೂರು, ಅ.8: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 69 ಕೋಟಿ ರೂ.ವೆಚ್ಚದಲ್ಲಿ ಸೆಸ್ಕ್ ಹಮ್ಮಿಕೊಂಡಿರುವ ಕಾಮಗಾರಿಗಳಿಗೆ ರವಿವಾರ ಪಟ್ಟಣದ ಪ್ರವಾಸಿಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಚಾಲನೆ ನೀಡಿದರು.
ಬಳಿಕ ತಮ್ಮಣ್ಣ ಮಾತನಾಡಿ, ತನ್ನ ಅವಧಿಯಲ್ಲಿ ಇಂಧನ ಇಲಾಖೆಗೆ 258 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ನಡೆಯುತ್ತಿರುವ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಅಗತ್ಯವಿರುವೆಡೆ ಟ್ಯ್ರಾನ್ಸ್ ಫಾರ್ಮರ್‍ಗಳ ಅಳವಡಿಕೆ, ಲೈನ್‍ಗಳ ದುರಸ್ಥಿ, ನೆನೆಗುದಿಗೆ ಬಿದ್ದಿದ್ದ ಕಬ್ಬಿಣ ಕಂಬಗಳ ಸ್ಥಳಾಂತರ ಮತ್ತಿತರ ಕಾರ್ಯಗಳಿಗಾಗಿ 4.31 ಕೋಟಿ. ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ತಾಲೂಕಿನಾದ್ಯಂತ ಕುಡಿಯುವ ನೀರು, ಗಂಗ ಕಲ್ಯಾಣ ಯೋಜನೆ, ನಿರಂತರ ಜ್ಯೋತಿ, ಅಕ್ರಮ, ಸಕ್ರಮ ಅನುಷ್ಠಾನ ಮತ್ತಿತರ ಕಾರ್ಯಗಳಿಗಾಗಿ 50 ಕೋಟಿ ರೂ.ಗೂ ಮಿಗಿಲಾದ ಹಣ ನಿಯೋಗಿಸಲಿರುವುದಾಗಿ ಅವರು ತಿಳಿಸಿದರು.
ಸೆಸ್ಕ್ ಇಇ ನಾಗಭೂಷಣ್ ಮಾತನಾಡಿ, ನಗರಕೆರೆ, ಮಾದರಹಳ್ಳಿ, ಯಡಗನಗಳ್ಳಿ, ಅರುವನಹಳ್ಳಿ ಮತ್ತು ತೊರೆಶೆಟ್ಟಹಳ್ಳಿ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಆಯ್ಕೆ ಮಾಡಲಾಗಿದ್ದು ಪ್ರತಿ ಗ್ರಾಮಗಳಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಭಾಗ್ಯಸತೀಶ್, ತಾಪಂ ಸದಸ್ಯರಾದ ಚಿಕ್ಕಮರಿಯಪ್ಪ, ನಂಜುಂಡಯ್ಯ, ಗ್ರಾಪಂ ಅಧ್ಯಕ್ಷ ದಾಸಪ್ಪ, ಎಇಇ ಶ್ರೀಕಾಂತ್, ಮೋಹನ್‍ರಾಜ್, ಇತರರು ಉಪಸ್ಥಿತರಿದ್ದರು.







