ನಾಕೌಟ್ ಹಂತಕ್ಕೇರುವ ವಿಶ್ವಾಸದಲ್ಲಿ ಘಾನಾ-ಅಮೆರಿಕ
ಹೊಸದಿಲ್ಲಿ, ಅ.8:ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಸೋಮವಾರ ಎರಡನೆ ಗ್ರೂಪ್ ಪಂದ್ಯವನ್ನು ಆಡಲಿರುವ ಘಾನಾ ಹಾಗೂ ಅಮೆರಿಕ ತಂಡಗಳು ನಾಕೌಟ್ ಹಂತಕ್ಕೇರುವ ವಿಶ್ವಾಸದಲ್ಲಿವೆ.
ಘಾನಾ ಹಾಗೂ ಅಮೆರಿಕ ತಂಡಗಳು ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ತಮ್ಮ ಅಭಿಯಾನ ಆರಂಭಿಸಿದ್ದವು. ಅಮೆರಿಕ ತಂಡ ಭಾರತವನ್ನು 3-0 ಅಂತರದಿಂದ ಮಣಿಸಿದರೆ, ಘಾನಾ ತಂಡ ಕೊಲಂಬಿಯಾವನ್ನು 1-0 ಅಂತರದಿಂದ ಮಣಿಸಿತು. ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಅಂತಿಮ-16ರ ಸುತ್ತಿನಲ್ಲಿ ಸ್ಥಾನ ಪಡೆಯಲಿದೆ. ಒಂದು ವೇಳೆ ಈ ಪಂದ್ಯ ಡ್ರಾಗೊಂಡರೆ ಉಭಯ ತಂಡಗಳಿಗೆ ನಾಕೌಟ್ ಹಂತಕ್ಕೇರುವ ಅವಕಾಶವಿರುತ್ತದೆ. ಪ್ರತಿ ಗುಂಪಿನ 2 ಅಗ್ರ ತಂಡಗಳು ಅಂತಿಮ-16ರ ಸುತ್ತಿಗೇರುತ್ತವೆ. ಅಮೆರಿಕ ತಂಡ ತನ್ನ ಮೊದಲ ಪಂದ್ಯದಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ಆತಿಥೇಯ ಭಾರತದ ವಿರುದ್ಧ ಸುಲಭ ಜಯ ಸಾಧಿಸಿತ್ತು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕೊಲಂಬಿಯಾವನ್ನು ಎದುರಿಸಿದ್ದ ಘಾನಾ ಏಕೈಕ ಗೋಲು ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿತ್ತು.ಕೊಲಂಬಿಯಾ ಮೊದಲಾರ್ಧದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದು, ಘಾನಾದ ಸ್ಟ್ರೈಕರ್ ಸಾದಿಕ್ ಇಬ್ರಾಹೀಂ 39ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದ್ದರು. ಉಭಯ ತಂಡಗಳು ವಿಶ್ವಕಪ್‌ಗೆ ಮೊದಲು 2 ಬಾರಿ ಮುಖಾಮುಖಿಯಾಗಿವೆ. ಎರಡೂ ಬಾರಿಯೂ(1995,1999) ಘಾನಾ 2-0 ಅಂತರದ ಗೆಲುವು ಸಾಧಿಸಿತ್ತು. 1991 ಹಾಗೂ 1995ರಲ್ಲಿ ಚಾಂಪಿಯನ್ ಆಗಿರುವ ಘಾನಾ 22 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವತ್ತ ಚಿತ್ತವಿರಿಸಿದೆ.





