ರಣಜಿ ಟ್ರೋಫಿ: ರೆಲ್ವೇಸ್ ಕೇರಳ, ಸೌರಾಷ್ಟ್ರಕ್ಕೆ ಜಯ
ಲಕ್ನೋ, ಅ.8: ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್ , ಕೇರಳ ಹಾಗೂ ಸೌರಾಷ್ಟ್ರ ತಂಡಗಳು ಜಯಭೇರಿ ಬಾರಿಸಿವೆ.
ಉತ್ತರಪ್ರದೇಶ-ರೈಲ್ವೇಸ್ ನಡುವಿನ ‘ಎ’ ಗುಂಪಿನ ಪಂದ್ಯ ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿಯಾಯಿತು. 3ನೆ ದಿನದಾಟವಾದ ರವಿವಾರ ಗೆಲುವಿಗೆ ಕೇವಲ 94 ರನ್ ಗುರಿ ಪಡೆದಿದ್ದ ಉತ್ತರಪ್ರದೇಶ ತಂಡ ರೈಲ್ವೇಸ್‌ನ ಅವಿನಾಶ್ ಯಾದವ್(4-26), ಅನುರೀತ್ ಸಿಂಗ್(3-25) ಹಾಗೂ ಬನ್ಸಾಲ್(2-11) ದಾಳಿಗೆ ಸಿಲುಕಿ ಕೇವಲ 72 ರನ್‌ಗೆ ಆಲೌಟಾಗಿ 21 ರನ್‌ಗಳಿಂದ ಸೋಲುಂಡಿದೆ. ರೈಲ್ವೇಸ್ ಅನಿರೀಕ್ಷಿತ ಗೆಲುವು ದಾಖಲಿಸಿದೆ.
ಮೊದಲ ಇನಿಂಗ್ಸ್‌ನಲ್ಲಿ 250 ರನ್ ಗಳಿಸಿದ್ದ ಉತ್ತರಪ್ರದೇಶ ತಂಡ ರೈಲ್ವೇಸ್‌ನ್ನು 182 ರನ್‌ಗೆ ನಿಯಂತ್ರಿಸಿ 68 ರನ್ ಮುನ್ನಡೆ ಪಡೆದಿತ್ತು. ರೈಲ್ವೇಸ್ 2ನೆ ಇನಿಂಗ್ಸ್‌ನಲ್ಲಿ 161 ರನ್‌ಗೆ ಆಲೌಟಾಗಿದ್ದು, ಉತ್ತರಪ್ರದೇಶ ಗೆಲುವಿಗೆ ಸುಲಭ ಸವಾಲು ಪಡೆದಿತ್ತು. ಆದರೆ, ಅದು ಗೆಲುವು ಸಾಧಿಸಲು ವಿಫಲವಾಯಿತು.
ಇನ್ನುಳಿದಂತೆ ಕೇರಳ ಹಾಗೂ ಸೌರಾಷ್ಟ್ರ ತಂಡಗಳು ಕ್ರಮವಾಗಿ ಜಾರ್ಖಂಡ್ ಹಾಗೂ ಹರ್ಯಾಣದ ವಿರುದ್ಧ ಜಯ ಸಾಧಿಸಿವೆ.
ಕೇರಳ ತಂಡ ಜಲಜ್ ಸಕ್ಸೇನಾರ ಆಲ್‌ರೌಂಡ್ ಆಟದ ನೆರವಿನಿಂದ ಜಾರ್ಖಂಡ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು. ಜಲಜ್ ಸಕ್ಸೇನಾ 77 ರನ್‌ಗೆ ಒಟ್ಟು 11 ವಿಕೆಟ್ ಉರುಳಿಸಿದ್ದಲ್ಲದೆ ಅಜೇಯ 54 ರನ್ ಗಳಿಸಿದ್ದರು.
ಸೌರಾಷ್ಟ್ರ ತಂಡ ಜೈದೇವ್ ಉನದ್ಕಟ್, ಶೌರ್ಯ ಶಾಂಡಿಲ್ಯ ಹಾಗೂ ಚಿರಾಗ್ ನೆರವಿನಿಂದ ಹರ್ಯಾಣದ ವಿರುದ್ಧ ಇನಿಂಗ್ಸ್ ಹಾಗೂ 31ರನ್ ಜಯ ಸಾಧಿಸಿದೆ.







