ಸಮಾಜದ ಅಭಿವೃದ್ಧಿಗೆ ಶಿಕ್ಷಣ ಪೂರಕವಾಗಿರಲಿ: ಶಾಸಕ ಬೋಪಯ್ಯ

ಮಡಿಕೇರಿ, ಅ.8: ಯಾವುದೇ ಸಮಾಜ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಬೇಕಾದರೆ ಶಿಕ್ಷಣದ ಶಕ್ತಿ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿದ ಹಿರಿಯ ಚೇತನಗಳಿಗೆ ನಾವು ಚಿರಋಣಿಯಾಗಿರಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಕೊಡಗು ಗೌಡ ವಿದ್ಯಾ ಸಂಘದಿಂದ ನಗರದ ಸಂಘದ ಸಭಾಂಗಣದಲ್ಲಿ ಆಯೋಜಿತ 2016-17ನೆ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪೊನ್ನಚ್ಚನ ಸೋಮಣ್ಣ ಮಾತನಾಡಿ, ಸಂಘದಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಇದೇ ವೇಳೆ ಜಮ್ಮುವಿನ ಕೃಷಿ ವಿಶ್ವ ವಿದ್ಯಾನಿಲಯಕ್ಕೆ 12ನೆ ರ್ಯಾಂಕ್ ಪಡೆದ ಕಾಂತೂರು ಗ್ರಾಮದ ಬೊಳ್ತಜ್ಜೀರ ಮನೋಜ್ ಸಿದ್ದಾರ್ಥ ಮತ್ತು ವೆಬ್ ಡಿಸೈನಿಂಗ್‌ನಲ್ಲಿ ಸಾಧನೆ ಮಾಡಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿರುವ ಕೆದಂಬಾಡಿ ಜೀವನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು, ಸಿಇಟಿಯಲ್ಲಿ ಸಾವಿರದ ಒಳಗೆ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಿರ್ದೇಶಕ ಕೆದಂಬಾಡಿ ಕಾಂಚನಾ ಕೀರ್ತನ್ ಪ್ರಾಸ್ತಾವಿಕವಾಗಿ ಮಾತನಾಡಿರು. ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟ ಮಾಜಿ ಸೈನಿಕರಾದ ಭಾಗಮಂಡಲದ ಕುದುಪಜೆ ಜೋಯಪ್ಪ, ನಿವೃತ್ತ ಶಿರಸ್ತೇದಾರ್ ಕಲ್ಲೆಂಬಿ ಡಾಲು ಉಪಸ್ಥಿತರಿದ್ದರು. ಕಟ್ಟೆಮನೆ ಜಾಗೃತಿ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ ಸ್ವಾಗತಿಸಿದರು. ಕಟ್ಟೆಮನೆ ಸೋನಾಜಿತ್, ಕೀರ್ತಿಕುಮಾರ್, ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು.







