ರುವಾಂಡದಲ್ಲಿ ಬಂಧಿತ ಹಕ್ಕಿಪಿಕ್ಕಿ ಜನಾಂಗದ 11 ಜನರ ಬಿಡುಗಡೆಗೆ ಸರಕಾರದಿಂದ ಕ್ರಮ
ಬೆಂಗಳೂರು, ಅ.8: ದಕ್ಷಿಣ ಆಫ್ರಿಕಾದ ರುವಾಂಡದಲ್ಲಿ ಗಿಡಮೂಲಿಕೆಗಳ ಮಾರಾಟಕ್ಕೆ ಹೋಗಿ ಸಿಲುಕಿಕೊಂಡಿರುವ ಶಿವಮೊಗ್ಗ ತಾಲೂಕಿನ ಸದಾಶಿವಪುರದ ಹಕ್ಕಿಪಿಕ್ಕಿ ಜನಾಂಗದ 11 ಜನರ ಬಿಡುಗಡೆಗೆ ರಾಜ್ಯ ಗೃಹ ಇಲಾಖೆ ನಡೆಸಿದ ಪ್ರಯತ್ನ ಸಫಲವಾಗಿದೆ.
ಹಕ್ಕಿ ಪಿಕ್ಕಿ ಜನಾಂಗದವರ ಬಂಧನದ ವಿಷಯ ತಿಳಿಯುತ್ತಲೇ, ತಕ್ಷಣ ಕಾರ್ಯಪ್ರವೃತ್ತರಾದ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ರವಾನೆ ಮಾಡಿದ್ದರು. ಬಂಧಿತರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯದ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ, ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದರು.
ತಕ್ಷಣ ಹಿರಿಯ ಅಧಿಕಾರಿಗಳು ಕೇಂದ್ರ ಸರಕಾರ ಮತ್ತು ರಾಯಭಾರ ಕಚೇರಿಯ ಜೊತೆ ಸಂಪರ್ಕ ಮಾಡಿದ್ದು, ಅಗತ್ಯ ಕ್ರಮ ಜರುಗಿಸಿದ್ದಾರೆ.
ಇದರನ್ವಯ ಬಂಧಿತರ ಬಿಡುಗಡೆಗೆ ನಡೆಸಿದ ಪ್ರಯತ್ನ ಫಲಪ್ರದವಾಗಿದೆ. ಇದೀಗ ಬಂಧಿತರು ಬಿಡುಗಡೆ ಆಗಿದ್ದು, ಅವರನ್ನು ರಾಜ್ಯಕ್ಕೆ ಕರೆತರುವ ಕಾರ್ಯದಲ್ಲಿ ಗೃಹ ಇಲಾಖೆ ನಿರತವಾಗಿದೆ. ಬಂಧಿತರನ್ನು ಕರೆತರಲು ವಿಮಾನದ ಟಿಕೆಟ್ ವ್ಯವಸ್ಥೆ ಆದ ಮರುಕ್ಷಣವೇ, ಪಾಸ್‌ಪೋರ್ಟ್ ನೀಡಿ ಅವರನ್ನು ಕರೆತರಲಾಗುವುದು.







