ಚಿಕ್ಕಮಗಳೂರು ಪ್ರಭಾವಿ ಜಿಲ್ಲಾಕೇಂದ್ರವಾಗಲಿ: ಜಿಲ್ಲಾಧಿಕಾರಿ ಜಿ.ಸತ್ಯವತಿ

ಚಿಕ್ಕಮಗಳೂರು, ಅ.9: ಜಿಲ್ಲೆಯನ್ನು ಆಡಳಿತಾತ್ಮಕವಾಗಿ ಪ್ರಭಾವಿ ಕೇಂದ್ರವನ್ನಾಗಿ ಮಾಡಬೇಕು. ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ ಬಡವರು ಹಾಗೂ ಸಾಮಾನ್ಯ ಜನರ ಕೆಲ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಿದ ತೃಪ್ತಿ ಇದೆ ಎಂದು ವರ್ಗಾವಣೆಯಾದ ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದ್ದಾರೆ.
ಕಳೆದ 15 ತಿಂಗಳ ಕಾಲ ಕರ್ತವ್ಯ ನಿರ್ವಹಿಸಿ, ಇದೀಗ ಕೋಲಾರಕ್ಕೆ ವರ್ಗಾವಣೆ ಗೊಂಡಿರುವ ಜಿ.ಸತ್ಯವತಿ ಸೋಮವಾರ ತಮ್ಮ ಕಚೆೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲ ಮಾಧ್ಯಮದವರು ಅತ್ಯಂತ ಜವಾಬ್ದಾರಿಯಿಂದ ಜಿಲ್ಲೆಯ ಆಗು-ಹೋಗುಗಳಿಗೆ ಸ್ಪಂದಿಸಿದ್ದನ್ನು ತಾವು ಗಮನಿಸಿದ್ದು, ಮಾಧ್ಯಮಗಳ ಕಾರ್ಯ ನಿರ್ವಹಣೆ ಶ್ಲಾಘನೀಯವೆಂದರು.
ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸರ್ವೇಸಾಮಾನ್ಯ ತಮ್ಮ ವರ್ಗಾವಣೆಯ ಬಗ್ಗೆ ತಮಗೆ ಬೇಸರವಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಕೆಲಸ ಮಾಡಿದ್ದು ಇನ್ನೂ ಅನೇಕ ಕೆಲಸಗಳು ಅಪೂರ್ಣ ವಾಗಿವೆ. ಅವುಗಳಿಂದ ಪ್ರಮುಖವಾಗಿ ಜಿಲ್ಲೆಗೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ವಾತಾವರಣ ಹಾಳಾಗುತ್ತಿದೆ. ಅದನ್ನು ತಡೆಗಟ್ಟುವ ಕೆಲಸ ಅಪೂರ್ಣವಾಗಿದೆ. ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಕಠಿಣ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಮರಳು ದೊರೆಯುವಂತೆ ಪ್ರಯತ್ನಿಸಿ ಇದರಲ್ಲಿ ಬಹುಪಾಲು ಯಶಸ್ವಿಯಾಗಿದ್ದು ಕೆಲವರಿಗೆ ತೊಂದರೆಯಾದರೂ ಕಾನೂನಾತ್ಮಕವಾಗಿ ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ ಎಂದರು.
ನೂತನ ಡಿಸಿ ಅಧಿಕಾರ ಸ್ವೀಕಾರ: ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಂ.ಕೆ. ಶ್ರೀರಂಗಯ್ಯ ಸೋಮವಾರ ಪೂರ್ವಾಹ್ನ ಅಧಿಕಾರ ಸ್ವೀಕರಿಸಿದರು. ಅವರು ನಿಕಟಪೂರ್ವ ಜಿಲ್ಲಾಧಿಕಾರಿ ಜಿ. ಸತ್ಯವತಿ ಅವರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.







