ಯಾತ್ರೆಯ ಹೆಸರಲ್ಲಿ ಬಿಜೆಪಿಯಿಂದ ಕೋಮುದ್ವೇಷ ಸೃಷ್ಟಿ: ಸಿಪಿಎಂ

ದಾವಣಗೆರೆ, ಅ.9: ಬಿಜೆಪಿ ಕೋಮು ದ್ವೇಷ ಹರಡುತ್ತಿದೆ ಎಂದು ಆರೋಪಿಸಿ ಹಾಗೂ ಸಿಪಿಐ(ಎಂ) ಮೇಲಿನ ದಾಳಿ ಖಂಡಿಸಿ ನಗರದಲ್ಲಿ ಸೋಮವಾರ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸ್ಥಳೀಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಸಮಿತಿಯ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಬಿಜೆಪಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ ನಡೆಸಿ, ಯಾತ್ರೆಯ ಹೆಸರಿನಲ್ಲಿ ಬಿಜೆಪಿ ಕೋಮು ದ್ವೇಷವನ್ನು ಬಿತ್ತುತ್ತಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ಹಾಗೂ ಮತ್ತಿತರ ಎಡ ಸಂಘಟನೆಗಳು, ಎಡಚಿಂತಕರು ಮತ್ತು ಪ್ರಗತಿಪರರ ಮೇಲೆ ದಾಳಿಯನ್ನು ಖಂಡಿಸಿದರು. ಅಚ್ಛೆದಿನ್ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಮೋದಿ ಸರಕಾರವು 40 ತಿಂಗಳಾದರೂ ಚುನಾವಣಾ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಅಚ್ಛೆ ದಿನ್ ಬಂದಿಲ್ಲ. ಕಪ್ಪುಹಣ ಭಾರತಕ್ಕೆ ಬಂದಿಲ್ಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಕನಸಿನ ಮಾತಾಗಿದೆ. ಬದಲು ವರ್ಷಕ್ಕೆ 2 ಕೋಟಿ ಉದ್ಯೋಗ ನಷ್ಟವಾಗಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೆಲೆ ಏರಿಕೆ ತಡೆಯಲಾಗುತ್ತಿಲ್ಲ. ಬಡತನ ಹೆಚ್ಚಾಗಿದೆ. ಆದರೆ ಕಾರ್ಪೊರೇಟ್ ಕಂಪೆನಿಗಳ ಮತ್ತು ಬಂಡವಾಳಗಾರರ ಆಸ್ತಿ ದುಪ್ಪಟ್ಟಾಗಿದೆ. ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ಈಡೇರಿಲ್ಲ. ಆದರೆ ರೈತರ ಆತ್ಮಹತ್ಯೆ ಪ್ರಮಾಣ ಶೇ. 47ರಷ್ಟು ಹೆಚ್ಚಾಗಿದೆ. ಕೇಂದ್ರದಲ್ಲಿ ಲೋಕಪಾಲ್ ನೇಮಕಾತಿ ಮಾಡಿಲ್ಲ. ಮಹಿಳಾ ಮೀಸಲಾತಿ ಮಸೂದೆ ಪಾರ್ಲಿಮೆಂಟ್ ಮುಂದೆ ತರಲಿಲ್ಲ ಎಂದು ದೂರಿದರು.
ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಹಾಗೂ ಪ್ರಗತಿ ಪರ ಸಾಹಿತಿ, ಚಿಂತಕರ ಮೇಲೆ ಸಂಘ ಪರಿವಾರದ ದಾಳಿಗಳು ಹೆಚ್ಚಾಗಿದ್ದು, ಕೋಮು ದ್ವೇಷ ಹೆಚ್ಚಿಸಲು ಹಿಟ್ಲರ್‌ನ ಫ್ಯಾಸಿಸ್ಟ್ ನೀತಿ ಹಾಗೂ ಗೋಬೆಲ್ಸ್‌ನ ಸುಳ್ಳು ಪ್ರಚಾರವನ್ನು ಬಿಜೆಪಿ ಮಾಡುತ್ತಿದೆ. ಸೌಹಾರ್ದತೆಯ ನಾಡಿಗಾಗಿ ಶ್ರಮಿಸುತ್ತಿರುವ ಸಿಪಿಐ ಮತ್ತಿತರ ಎಡ, ಪ್ರಗತಿಪರರ ಮೇಲೆ ಬಿಜೆಪಿ ಹಾಗೂ ಪರಿವಾರವು ನಡೆಸುತ್ತಿರುವ ದಾಳಿ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.







