ಅ.10ರಿಂದ ರಾಜ್ಯ ಗುತ್ತಿಗೆದಾರರ ಸಮ್ಮೇಳನ
ಚಿಕ್ಕಮಗಳೂರು, ಅ.9: ಬೆಂಗಳೂರಿನ ಅರಮನೆ ಮೈದಾನದ ಪ್ಯಾಲೇಸ್ ಶೀಷಮಹಲ್ ಆವರಣದಲ್ಲಿ ಅ.10 ಮತ್ತು 11 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಮ್ಮೇಳನಕ್ಕೆ ಜಿಲ್ಲೆಯಿಂದ 200ಕ್ಕೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆ.ಎಸ್.ಶಾಂತೇಗೌಡ ತಿಳಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಿಂದ 200ಕ್ಕೂ ಹೆಚ್ಚಿನ ಗುತ್ತಿಗೆದಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಭಾಗವಹಿಸುವ ಪ್ರತಿನಿಧಿಗಳಿಗೆ ಊಟ ವಸತಿ ವ್ಯವಸ್ಥೆಯನ್ನು ರಾಜ್ಯ ಗುತ್ತಿಗೆದಾರರ ಸಂಘ ಏರ್ಪಡಿಸಿದೆ. ಬೆಂಗಳೂರಿನ ಮೈದಾನದ ಆವರಣದಲ್ಲಿ ನಡೆಯಲಿರುವ ಸಮ್ಮೇಳನವನ್ನು ಅ.10 ರಂದು ಬೆಳಗ್ಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಸಿ.ಮಹದೇವಪ್ಪ, ಎಚ್.ಕೆ.ಪಾಟೀಲ್, ಕೆ.ಜೆ.ಜಾರ್ಜ್, ಎಂ.ಪಿ.ಪಾಟೀಲ್, ಎಚ್.ಎಂ.ರೇವಣ್ಣ, ಶಾಸಕ ಅಶ್ವತ್ಥನಾರಾಯಣ ಭಾಗವಹಿಸುತ್ತಿದ್ದು, ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸುವರು. ಅ.10ರ ಮಧ್ಯಾಹ್ನ ತಾಂತಿಕ ಗೋಷ್ಠಿಗಳು ನಡೆಯಲಿವೆ. ಸಮಾರೋಪದಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಚಿವ ಕೃಷ್ಣಬೈರೇಗೌಡ ಭಾಗವಹಿಸುವರು. ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ಡಾ.ಸುಮನ ರಂಜಲ್ಕರ್ ಮತ್ತು ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.







