ಮಜಿರೆ ಗ್ರಾಮಗಳನ್ನು ತೀರ್ಥಹಳ್ಳಿ ತಾಲೂಕಿಗೆ ಸೇರಿಸಲು ಮನವಿ
ಶಿವಮೊಗ್ಗ, ಅ.9: ಜಿಲ್ಲೆಯ ಹೊಸನಗರ ತಾಲೂಕಿನಿ ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಮಜಿರೆ ಗ್ರಾಮಗಳನ್ನು ತೀರ್ಥಹಳ್ಳಿ ತಾಲೂಕಿಗೆ ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ಯಡೂರು - ಸುಳುಗೋಡು ಗ್ರಾಪಂ ಹಿತರಕ್ಷಣಾ ಸಮಿತಿಯು ಸೋಮವಾರ ನಗರದ ಡಿಸಿ ಕಚೇರಿಯಲ್ಲಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿತು.
ವಾರಾಹಿ ಜಲವಿದ್ಯುತ್ ಯೋಜನೆಯಿಂದಾಗಿ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ 25 ಗ್ರಾಮಗಳು ಮುಳುಗಡೆ ಪ್ರದೇಶದ ವ್ಯಾಪ್ತಿಗೆ ಸೇರಿವೆ. ಇದರಲ್ಲಿ ಕೆಲವು ಪೂರ್ಣ ಮುಳುಗಡೆಯಾಗಿವೆ. ಇನ್ನೂ ಕೆಲವು ಭಾಗಶಃ ಮುಳುಗಡೆಯಾಗಿವೆ.ಭಾಗಶಃ ಉಳಿದಿರುವ ಯಡೂರು-ಸುಳುಗೋಡು ಗ್ರಾಪಂ ವ್ಯಾಪ್ತಿಯ ಎಲ್ಲಾ ಮಜಿರೆ ಗ್ರಾಮಗಳನ್ನು ತೀರ್ಥಹಳ್ಳಿ ತಾಲೂಕಿಗೆ ಸೇರ್ಪಡೆಗೊಳಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಕೆಡಿಪಿ ಸಭೆೆಯಲ್ಲಿಯೂ ಸಹ ನಿರ್ಣಯವನ್ನು ಮಾಡಿ, ಸರಕಾರಕ್ಕೆ ಕಳುಹಿಸಲಾಗಿದೆ. ಈ ಗ್ರಾಮಗಳು ತಾಲೂಕು ಕೇಂದ್ರ ಹೊಸನಗರಕ್ಕೆ ಬಹಳ ದೂರದಲ್ಲಿವೆ. ತೀರ್ಥಹಳ್ಳಿ ತಾಲೂಕಿಗೆ ಹತ್ತಿರವಾಗಿದ್ದು, ಇವುಗಳನ್ನು ತೀರ್ಥಹಳ್ಳಿ ತಾಲೂಕಿಗೆ ಸೇರಿಸಿದರೆ ಆ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಪ್ರಸ್ತುತ ಹೊಸನಗರ ತಾಲೂಕಿನಲ್ಲಿದ್ದು, ತಾಲೂಕು ಕೇಂದ್ರಕ್ಕೆ ತಲುಪಬೇಕಾದರೆ 45ರಿಂದ 105 ಕಿ.ಮೀ .ಪ್ರಯಾಣಿಸಬೇಕಿದೆ. ಅಲ್ಲದೆ, 4 ಬಸ್‌ಗಳನ್ನು ಬದಲಾಯಿಸಬೇಕಾಗುತ್ತದೆ. ಇದರಿಂದ ಗ್ರಾಮಸ್ಥರಿಗೆ ಕಚೇರಿ ಕೆಲಸಗಳನ್ನು ಪೂರೈಸಿಕೊಳ್ಳಲು ತೀವ್ರ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಅಲವತ್ತುಕೊಂಡಿದ್ದಾರೆ.
ತೀರ್ಥಹಳ್ಳಿ ತಾಲೂಕಿಗೆ ಸೇರ್ಪಡೆಗೊಳಿಸಿದರೆ ಸರಕಾರಿ ಕಾರ್ಯಗಳು ಸೇರಿದಂತೆ ಕೋರ್ಟ್ ಇನ್ನಿತರ ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಳ್ಳಬೇಕು.ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೂಡ ಮನವಿ ಸಲ್ಲಿಸಲಾಗಿದೆ.
ಜಿಲ್ಲಾ ಸಚಿವರು ಈ ಬಗ್ಗೆ ಸರಕಾರದ ಗಮನ ಸೆಳೆದು ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಸಮಿತಿಯ ಮುಖಂಡರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವೈ.ವಿ. ಭಾಸ್ಕರ್ ಜೋಯಿಸ್, ಎಚ್.ಆರ್. ಮೂರ್ತಿಗೌಡ, ನಾಗರಾಜ್, ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.







