ನಾಳೆ ಆಸ್ಟ್ರೇಲಿಯ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯ
ಇನ್ನೊಂದು ಸರಣಿ ಗೆಲುವಿನ ಹಾದಿಯಲ್ಲಿ ಕೊಹ್ಲಿ ಪಡೆ

ಗುವಾಹತಿ, ಅ.9: ಟೀಮ್ ಇಂಡಿಯಾ ಮಂಗಳವಾರ ನಡೆಯಲಿರುವ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗೆಲುವಿನೊಂದಿಗೆ ಸರಣಿ ಜಯಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ.
ಎಸಿಎ-ಬಾರ್ಸಪರ್ ಸ್ಟೇಡಿಯಂನಲ್ಲಿ ಮೊದಲ ಬಾರಿ ನಡೆಯಲಿರುವ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ಆಸ್ಟ್ರೇಲಿಯದ ವಿರುದ್ಧ ಸತತ ಎರಡನೆ ಗೆಲುವು ಭಾರತದ ಪಾಲಾಗಲಿದೆ.
ಏಕದಿನ ಕ್ರಿಕೆಟ್ ಸರಣಿಯಲ್ಲಿ 4-1 ಯಶಸ್ಸು ಸಾಧಿಸಿರುವ ಟೀಮ್ ಇಂಡಿಯಾ ರಾಂಚಿಯಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 9 ವಿಕೆಟ್‌ಗಳ ಜಯ ಗಳಿಸಿತ್ತು. ಮಳೆಬಾಧಿತ ಪಂದ್ಯದಲ್ಲಿ ಜಯ ಗಳಿಸಿದ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯ ಸರಣಿ ಗೆಲ್ಲಲು ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಕೊನೆಯ ಪಂದ್ಯ ಹೈದರಾಬಾದ್‌ನಲ್ಲಿ ಅ.13ರಂದು ನಡೆಯಲಿದೆ.
ಆಸ್ಟ್ರೇಲಿಯ ವಿರುದ್ಧ ಭಾರತ ಆಡಿರುವ ಕಳೆದ 14 ಟ್ವೆಂಟಿ-20 ಪಂದ್ಯಗಳ ಪೈಕಿ 10ರಲ್ಲಿ ಜಯ ಗಳಿಸಿದೆ. 4ರಲ್ಲಿ ಸೋಲು ಅನುಭವಿಸಿದೆ. ಆಸ್ಟ್ರೇಲಿಯ ತಂಡಕ್ಕೆ ಭಾರತದ ವಿರುದ್ಧ ಗೆಲುವು ಸುಲಭವಲ್ಲ. ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಹಾಲ್ ತಲೆನೋವು ತಂದಿದ್ದಾರೆ.ಅವರು 4 ಏಕದಿನ ಮತ್ತು 1 ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯದ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಆಸ್ಟ್ರೇಲಿಯದ ಬಹುತೇಕ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆಡಿದವರು. ಭಾರತದ ವಾತಾವರಣವನ್ನು ಚೆನ್ನಾಗಿ ಅರಿತುಕೊಂಡಿದ್ದರೂ, ಅವರಿಗೆ ಮಿಂಚಲು ಸಾಧ್ಯವಾಗುತ್ತಿಲ್ಲ.
ಭಾರತದ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಒಬ್ಬರನೊಬ್ಬ್ಬರು ಮೀರಿಸುವ ರೀತಿಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ರಾಂಚಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯದ ಖಾತೆಗೆ ರನ್ ಹರಿದು ಹೋಗುತ್ತಿದ್ದಾಗ ಯಾದವ್ ಮತ್ತು ಚಹಾಲ್ ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಕಡಿವಾಣ ತೊಡಿಸಿದ್ದರು.
ಆಸ್ಟ್ರೇಲಿಯದ ಅಗ್ರ ಸರದಿಯ ಬ್ಯಾಟಿಂಗ್ ವಾರ್ನರ್, ಫಿಂಚ್ ಮತ್ತು ಸ್ಮಿತ್ ಅವರನ್ನು ಅವಲಂಬಿಸಿದೆ. ಆದರೆ ಸ್ಮಿತ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ತಂಡದ ಸೇವೆಗೆ ಲಭ್ಯರಿಲ್ಲ. ಇದು ಆಸ್ಟ್ರೇಲಿಯಕ್ಕೆ ದೊಡ್ಡ ಹಿನ್ನಡೆಯಾಗಿದೆ.ಆಸ್ಟ್ರೇಲಿಯ ತಂಡ ಇದೀಗ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಮೇಲೆ ಭರವಸೆ ಇರಿಸಿದೆ. ಮೂರು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 39, 15, 5 ರನ್ ದಾಖಲಿಸಿದ್ದ ಮ್ಯಾಕ್ಸ್‌ವೆಲ್ ಟ್ವೆಂಟಿ-20 ಪಂದ್ಯದಲ್ಲಿ 17 ರನ್ ಗಳಿಸಿದ್ದರು. ಚಹಾಲ್ ದಾಳಿಯನ್ನು ಎದುರಿಸುವಲ್ಲಿ ಮ್ಯಾಕ್ಸ್‌ವೆಲ್ ಎಡವುತ್ತಿದ್ದಾರೆ. ಆದರೆ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಚೆನ್ನಾಗಿ ಆಡಲಿದ್ದಾರೆಂದು ಫಿಂಚ್ ಹೇಳಿದ್ದಾರೆ.
ಫಿಂಚ್ ಅವರು ಯಾದವ್ ದಾಳಿಯ ಮುಂದೆ ರನ್ ಗಳಿಸಲು ಪರದಾಡುತ್ತಿದ್ದಾರೆ. ರಾಂಚಿಯಲ್ಲಿ ಯಾದವ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ನಥಾನ್ ಕೌಲ್ಟರ್ ನೀಲ್ ಏಕದಿನ ಸರಣಿಯಲ್ಲಿ 10 ವಿಕೆಟ್ ಪಡೆದಿದ್ದರು. ಆಸ್ಟ್ರೇಲಿಯ ಪರ ಗರಿಷ್ಠ ವಿಕೆಟ್ ಪಡೆದಿದ್ದ ನೀಲ್ ಅವರು ಎಡಗೈ ವೇಗಿ ಜೇಸನ್ ಬೆಹೆರೆನ್ಡಾಫ್‌ರೊಂದಿಗೆ ರಾಂಚಿಯಲ್ಲಿ ಭರವಸೆಯ ಪ್ರದರ್ಶನ ನೀಡಿದ್ದರು.
ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಅವರು ರಾಂಚಿ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರು. ಉತ್ತಮ ಫಾರ್ಮ್ ನಲ್ಲಿರುವ ಅಜಿಂಕ್ಯ ರಹಾನೆ ಅನುಪಸ್ಥಿತಿ ತಂಡವನ್ನು ಕಾಡದಂತೆ ಧವನ್ ನೋಡಿಕೊಂಡರು. ಏಕದಿನ ಕ್ರಿಕೆಟ್ ಸರಣಿಯಲ್ಲಿ ಗರಿಷ್ಠ ರನ್ ದಾಖಲಿಸಿದ್ದ ರೋಹಿತ್ ಶರ್ಮ ರಾಂಚಿ ಪಂದ್ಯದಲ್ಲಿ ಬೇಗನೆ ಔಟಾಗಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ಧವನ್‌ಗೆ ಸಾಥ್ ನೀಡಿ ತಂಡದ ಗೆಲುವಿಗೆ ಅಗತ್ಯದ ರನ್ ದಾಖಲಿಸಲು ನೆರವಾದರು. ಬಾರ್ಸಪರ್ ಸ್ಟೇಡಿಯಂನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ. ಕಳೆದ ವರ್ಷ ಇಲ್ಲಿ ನಡೆದ ರಣಜಿ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಹೈದರಾಬಾದ್ 30 ರನ್‌ಗೆ ಆಲೌಟ್ ಮಾಡಿತ್ತು. 2000ರ ಬಳಿಕ ರಣಜಿಯಲ್ಲಿ ದಾಖಲಾಗಿದ್ದ ನಾಲ್ಕನೆ ಕನಿಷ್ಠ ಸ್ಕೋರ್ ಇದಾಗಿತ್ತು. ಈ ಕಾರಣದಿಂದಾಗಿ ಈ ಪಿಚ್ ಬೌಲರ್‌ಗಳ ಸ್ನೇಹಿಯಾಗಿದೆ. ಬ್ಯಾಟ್ಸ್‌ಮನ್‌ಗಳಿಗೆ ಸವಾಲು ಎದುರಾಗಲಿದೆ.
ಭಾರತ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ(ಉಪನಾಯಕ), ಶಿಖರ್ ಧವನ್, ಲೋಕೇಶ್ ರಾಹುಲ್, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯುಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಆಶೀಷ್ ನೆಹ್ರಾ, ಅಕ್ಷರ್ ಪಟೇಲ್.
ಆಸ್ಟ್ರೇಲಿಯ : ಡೇವಿಡ್ ವಾರ್ನರ್(ನಾಯಕ), ಜೇಸನ್ ಬೆಹೆರೆನ್ಡಾಫ್ , ಡ್ಯಾನ್ ಕ್ರಿಶ್ಟಿಯನ್, ನಥಾನ್-ಕೌಲ್ಟರ್ ನೀಲ್,ಆ್ಯರೊನ್ ಫಿಂಚ್, ಟ್ರಾವಿಸ್ ಹೆಡ್, ಮೊಯ್ಸಿಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಪೈನೆ, ಕೇನ್ ರಿಚರ್ಡ್ಸನ್, ಆ್ಯಡಮ್ ಝಾಂಪ, ಮಾರ್ಕಸ್ ಸ್ಟೋನಿಸ್, ಆ್ಯಂಡ್ರೊ ಟೈ.
ಪಂದ್ಯದ ಸಮಯ: ರಾತ್ರಿ7:00 ಗಂಟೆಗೆ ಆರಂಭ







