ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕು ಸದ್ಬಳಕೆ ಮಾಡಿಕೊಳ್ಳಿ: ರಾಧಾಕೃಷ್ಣ

ಚಿಕ್ಕಮಗಳೂರು, ಅ.9: ದಲಿತರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಮತದಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಸಲಹೆ ಮಾಡಿದರು.
ಅವರು ಸೋಮವಾರ ದಾದಾ ಸಾಹೇಬ್ ಕಾನ್ಶೀರಾಂ ಅವರ ಪರಿನಿಬ್ಬಾಣ ದಿನದ ಅಂಗವಾಗಿ ನಗರದ ಬಿಎಸ್ಪಿ ಕಚೆೇರಿಯಲ್ಲಿ ನಡೆದ ಬಹುಜನ ಸಂಕಲ್ಪದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಬಹುಸಂಖ್ಯಾತರಾಗಿರುವ ದಲಿತರ ಉದ್ಧಾರ ಯಾವುದೇ ಪಕ್ಷಗಳಿಂದಲೂ ಸಾಧ್ಯವಿಲ್ಲ ಎನ್ನುವುದನ್ನು ಅಂಬೇಡ್ಕರ್ ಅರಿತಿದ್ದರು. ಅದರಿಂದಾಗಿ ಸತತ ಹೋರಾಟದ ಮೂಲಕ ದಲಿತರಿಗೆ ಮತದಾನದ ಹಕ್ಕನ್ನು ಒದಗಿಸಿದರು ಎಂದರು.
ಇದುವರೆಗೆ ದೇಶವನ್ನಾಳಿರುವ ಯಾವುದೇ ಪಕ್ಷಗಳೂ ಅಂಬೇಡ್ಕರ್ ಅವರ ಸಂವಿಧಾನವನ್ನು ಇಡಿಯಾಗಿ ಅನುಷ್ಠಾನಗೊಳಿಸಿಲ್ಲ. ಎಲ್ಲಾ ಪಕ್ಷಗಳೂ ಮೇಲ್ವರ್ಗದವರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿವೆ ಎಂದ ಅವರು, ದಲಿತರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರದೇ ಪಕ್ಷವಾದ ಬಿಎಸ್ಪಿಗೆ ಮತ ನೀಡುವ ಸಂಕಲ್ಪಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಿ.ಕೆ.ಬಸವರಾಜ್, ಬಹುಜನರ ಅಭಿವೃದ್ಧ್ದಿಗಾಗಿ ಕಾನ್ಶಿರಾಂ ಅವರು 20 ಸಾವಿರ ಕಿ.ಮೀ ದೂರವನ್ನು ಸೈಕಲ್‌ನಲ್ಲಿ ತೆರಳಿ ಸಾಕಷ್ಟು ಶ್ರಮದಿಂದ ಸ್ಥಾಪಿಸಿರುವ ಬಹುಜನ ಸಮಾಜ ಪಕ್ಷವನ್ನು ಜಿಲ್ಲೆಯಲ್ಲೂ ಕಟ್ಟಿ ಬೆಳೆಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಖಜಾಂಚಿ ಪಿ.ಪರಮೇಶ್ ಮಾತನಾಡಿ, ದೇಶದ ರಾಷ್ಟ್ರೀಯ ಪಕ್ಷಗಳ ಸಾಲಿನಲ್ಲಿ ಮೂರನೆ ಸ್ಥಾನದಲ್ಲಿರುವ ಬಿಎಸ್ಪಿಯನ್ನು ಮೊದಲನೇ ಸ್ಥಾನಕ್ಕೆ ತರಲು ಬಹುಜನರು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಚೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್, ಜಿಲ್ಲಾ ಸಮಿತಿ ಸದಸ್ಯ ಪಿ.ವಿ.ತಂಬನ್, ಮಹಿಳಾ ಘಟಕದ ಸಂಚಾಲಕಿ ಕೆ.ಬಿ.ಸುಧಾ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾಜಿ ಉಪಸ್ಥಿತರಿದ್ದರು.







