ಗೆಲುವಿನ ಖಾತೆ ತೆರೆದ ಮಾಲಿ
ಪ್ರಿ-ಕ್ವಾ. ಫೈನಲ್ ಸ್ಥಾನ ಖಚಿತಪಡಿಸಿದ ಅಮೆರಿಕ

ನವಿಮುಂಬೈ, ಅ.9: ಆಫ್ರಿಕನ್ ಚಾಂಪಿಯನ್ ಮಾಲಿ ತಂಡ ಫಿಫಾ ಅಂಡರ್-17 ವಿಶ್ವಕಪ್‌ನ ‘ಬಿ’ ಗುಂಪಿನ ತನ್ನ ಎರಡನೆ ಪಂದ್ಯದಲ್ಲಿ ಟರ್ಕಿ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಹೊಸದಿಲ್ಲಿಯ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನಿರೀಕ್ಷ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಅಮೆರಿಕ ತಂಡ ಘಾನಾ ತಂಡವನ್ನು 1-0 ಅಂತರದಿಂದ ಸೋಲಿಸಿತು. ಸತತ ಎರಡನೆ ಜಯ ಸಾಧಿಸಿದ ಅಮೆರಿಕ ಅಂತಿಮ 16ರ ಸುತ್ತಿಗೆ ತನ್ನ ಸ್ಥಾನ ಖಚಿತಪಡಿಸಿದೆ. ಕೊಲಂಬಿಯಾ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಡ್ರಾಗೊಳಿಸಿದರೆ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದು ಮುಂದಿನ ಸುತ್ತಿಗೆ ಲಗ್ಗೆ ಇಡಲಿದೆ.
ತನ್ನ ಮೊದಲ ಪಂದ್ಯದಲ್ಲಿ ಭಾರತವನ್ನು 3-0 ಅಂತರದಿಂದ ಮಣಿಸಿರುವ ಅಮೆರಿಕ ಇದೀಗ ‘ಎ’ ಗುಂಪಿನಲ್ಲಿ ಒಟ್ಟು 6 ಅಂಕವನ್ನು ಗಳಿಸಿ ಅಗ್ರ ಸ್ಥಾನದಲ್ಲಿದೆ.
ಮಾಲಿ ತಂಡ ಅ.6 ರಂದು ನಡೆದಿದ್ದ ಪರಾಗ್ವೆ ವಿರುದ್ಧದ ತನ್ನ ಮೊದಲ ಲೀಗ್ ಪಂದ್ಯದಲ್ಲಿ 2-3 ಅಂತರದಿಂದ ಸೋತಿತ್ತು. 2015ರ ವಿಶ್ವಕಪ್‌ನ ರನ್ನರ್ಸ್-ಅಪ್ ಮಾಲಿ ತಂಡ ಮೊದಲಾರ್ಧದಲ್ಲಿ ಒಂದು ಹಾಗೂ ದ್ವಿತೀಯಾರ್ಧದಲ್ಲಿ ಎರಡು ಗೋಲು ಬಾರಿಸಿತು. ಟರ್ಕಿ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತು.
ಆರಂಭದಲ್ಲಿ ಕೆಲವು ಅವಕಾಶವನ್ನು ಕೈಚೆಲ್ಲಿದ್ದ ಮಾಲಿ 38ನೆ ನಿಮಿಷದಲ್ಲಿ ಮಿಡ್‌ಫೀಲ್ಡರ್ ಡಿಜೌಸ್ಸಾ ಟ್ರೇರ್ ಬಾರಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿತ್ತು. 68ನೆ ನಿಮಿಷದಲ್ಲಿ ಎರಡನೆ ಗೋಲು ಬಾರಿಸಿದ ಲಾಸಾನ ಎನ್ ಡೈಯೆ ಮಾಲಿ ತಂಡದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ಡಿಫೆಂಡರ್ ಫೋಡ್ ಕೊನಾಟೆ 86ನೆ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ಮಾಲಿ ತಂಡಕ್ಕೆ 3-0 ಅಂತರದ ಭರ್ಜರಿ ಗೆಲುವು ತಂದುಕೊಟ್ಟರು.
ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿರುವ ಮಾಲಿ ಅ.12 ರಂದು ನ್ಯೂಝಿಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದೆ. ಅ.6 ರಂದು ನಡೆದಿದ್ದ ನ್ಯೂಝಿಲೆಂಡ್ ವಿರುದ್ಧ ಪಂದ್ಯವನ್ನು ಡ್ರಾಗೊಳಿಸಿದ್ದ ಟರ್ಕಿ ತಂಡ ಗುರುವಾರ ಪರಾಗ್ವೆ ತಂಡವನ್ನು ಎದುರಿಸಲಿದೆ.
ಅಮೆರಿಕಕ್ಕೆ ಸತತ ಜಯ: ಹೊಸದಿಲ್ಲಿಯಲ್ಲಿ ನಡೆದಿದ್ದ 17 ವರ್ಷದೊಳಗಿನವರ ವಿಶ್ವಕಪ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಅಮೆರಿಕ ತಂಡ ಘಾನಾ ತಂಡವನ್ನು 1-0 ಅಂತರದಿಂದ ಮಣಿಸಿತು.
ದ್ವಿತೀಯಾರ್ಧದ 75ನೆ ನಿಮಿಷದಲ್ಲಿ ಬದಲಿ ಆಟಗಾರ ಅಯೊ ಅಕಿನೊಲಾ ಗೋಲು ಬಾರಿಸಿ ಅಮೆರಿಕ 1-0 ಅಂತರದ ಗೆಲುವು ಸಾಧಿಸಲು ನೆರವಾದರು.
ಅಮೆರಿಕದ ಕೋಚ್ ಜಾನ್ ಹಾಕ್‌ವರ್ತ್ 64ನೆ ನಿಮಿಷದಲ್ಲಿ ಸೆರ್ಜಿಯೊ ಡರ್ಸ್ ಬದಲಿಗೆ ಅಕಿನೊಲಾರನ್ನು ಕಣಕ್ಕಿಳಿಸಿದರು. ಮೈದಾನಕ್ಕೆ ಇಳಿದು 12 ನಿಮಿಷದೊಳಗೆ ಅಮೆರಿಕದ ಪರ ಗೆಲುವಿನ ಗೋಲು ಬಾರಿಸಿದ ಅಕಿನೊಲಾ ಕೋಚ್ ತನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡರು.
ಅಬ್ದುಲ್ ಯೂಸುಫ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಘಾನಾ 10 ಆಟಗಾರರೊಂದಿಗೆ ಆಡಬೇಕಾಯಿತು. ಅಮೆರಿಕ ವಿರುದ್ಧ ಶರಣಾಗಿರುವ ಘಾನಾ ಗುರುವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ.







